ಖಾನಾಪುರ:ಕೃಷಿ ಇಲಾಖೆಯ ಜಲಾಮೃತ ಯೋಜನೆಯ ಪ್ರಯೋಜನ ಪಡೆಯಲು ಕರೆ
ಕೃಷಿ ಇಲಾಖೆಯ ಜಲಾಮೃತ ಯೋಜನೆಯ ಪ್ರಯೋಜನ ಪಡೆಯಲು ಕರೆ
ಖಾನಾಪುರ ನ 2 : ರೈತರು ಕೃಷಿ ಇಲಾಖೆಯ ಜಲಾಮೃತ ಯೋಜನೆಯ ಪ್ರಯೋಜನ ಪಡೆಯಬೇಕು. ಈ ಯೋಜನೆಯಡಿ ಸರ್ಕಾರದ ಸಹಾಯಧನ ಪಡೆದು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡರೆ ಇಲಾಖೆಯಿಂದ ಆರ್ಥಿಕ ಸೌಲಭ್ಯವನ್ನು ಪಡೆಯಬಹುದಾಗಿದೆ. ದೀರ್ಘಕಾಲದ ಅವಧಿಗೆ ಕೃಷಿ ಹೊಂಡದಲ್ಲಿ ನೀರು ಶೇಖರಿಸುವ ಮೂಲಕ ಕಡಿಮೆ ನೀರು ಬಳಸಿ ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಬಿ ಚವಾಣ ಕರೆ ನೀಡಿದರು.
ತಾಲೂಕಿನ ಸುರಪುರ ಕೇರವಾಡ ಗ್ರಾಮದ ಬಳಿ ಕೇರವಾಡ ಗ್ರಾಮ ಪಂಚಾಯ್ತಿ ಮತ್ತು ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳಲಿರುವ ಜಲಾಮೃತ ಕಿರು ನೀರು ಸರಬರಾಜು ಯೋಜನೆಯ ಭೂಮಿಪೂಜೆಯನ್ನು ಗುರುವಾರ ಕಕ್ಕೇರಿ ಕ್ಷೇತ್ರದ ಜಿ.ಪಂ ಸದಸ್ಯ ಸುರೇಶ ಮ್ಯಾಗೇರಿ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಸಮೀಪದ ಗ್ರಾಪಂ ಮತ್ತು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ದೀಪಾ ವಡೆಯರ, ಮಹಾಂತೇಶ ಹವಾಲ್ದಾರ, ಡಿ.ಎಚ್ ರಾಠೋಡ, ಎಂ.ಬಿ ರಾಠೋಡ, ಎಚ್.ಜಿ ದಾಸರ ಸೇರಿದಂತೆ ಸುರಪುರ-ಕೇರವಾಡ ಹಾಗೂ ಸುತ್ತಲಿನ ಭಾಗದ ರೈತರು, ಕೃಷಿ ಇಲಾಖೆಯ ಸಿಬ್ಬಂದಿ, ಭುರಣಕಿ, ಕೇರವಾಡ ಗ್ರಾಪಂ ಅಧ್ಯಕ್ಷರು, ಪಿಡಿಒ, ಸದಸ್ಯರು ಹಾಗೂ ಸ್ಥಳೀಯರು ಇದ್ದರು.