ಬೆಳಗಾವಿ:ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ವಿಧಿವಶ
ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ವಿಧಿವಶ
ಬೆಳಗಾವಿ ನ 6 : ಕೇಂದ್ರದ ಮಾಜಿ ಸಚಿವ ಬಿ.ಶಂಕರಾನಂದ ಸುಪುತ್ರ ಹಾಗೂ ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ಇಂದು ವಿಧಿವಶರಾಗಿದ್ದಾರೆ
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಓಂಪ್ರಕಾಶ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ. ಇಲ್ಲಿನ ಕ್ಲಬ್ ರಸ್ತೆಯ ತಮ್ಮ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಾಜಿ ಸಂಸದ ಎಸ್.ಬಿ. ಸಿದ್ನಾಳ ಸೇರಿದಂತೆ ಜಿಲ್ಲೆಯ ಹಿರಿಯ ರಾಜಕಾರಣಿಗಳು ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ವೀರಪ್ಪ ಮೊಯ್ಲಿ ನೇತೃತ್ವದ ಸರ್ಕಾರದಲ್ಲಿ ಓಂಪ್ರಕಾಶ್ ಸಣ್ಣ ನೀರಾವರಿ ಸಚಿವರಾಗಿದ್ದರು. ಹುಕ್ಕೇರಿ ತಾಲೂಕಿನ ಕೊಟಬಾಗಿ ಏತನೀರಾವರಿ ಸೇರಿದಂತೆ ಜಿಲ್ಲೆಯ ಹಲವು ನೀರಾವರಿ ಯೋಜನೆ ಅನುಷ್ಠಾನಗೊಳಿಸಿದ್ದರು.
ಓಂಪ್ರಕಾಶ್ ಅವರು ಪತ್ನಿ, ಮೂವರು ಪುತ್ರರು, ಸಹೋದರ ಹಾಗೂ ಆರು ಜನ ಸಹೋದರಿಯರನ್ನು ಅಗಲಿದ್ದಾರೆ