ಬೆಳಗಾವಿ:ಅರಭಾವಿ ಕ್ಷೇತ್ರಕ್ಕೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ 2 ಕೋಟಿ ರೂ. ಅನುದಾನ ಹಂಚಿಕೆ : ಸಚಿವ ಡಿ.ಕೆ. ಶಿ
ಅರಭಾವಿ ಕ್ಷೇತ್ರಕ್ಕೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ 2 ಕೋಟಿ ರೂ. ಅನುದಾನ ಹಂಚಿಕೆ : ಸಚಿವ ಡಿ.ಕೆ. ಶಿ
ಬೆಳಗಾವಿ ಡಿ 20 : 2018-19ನೇ ಸಾಲಿನಲ್ಲಿ ಅರಭಾವಿ ವಿಧಾನಸಭಾ ಕ್ಷೇತ್ರಕ್ಕೆ ಜಲಸಂಪನ್ಮೂಲ ಇಲಾಖೆಯಿಂದ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ 2 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.
ಇಲ್ಲಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದರು.
2018-19ನೇ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಜಲಸಂಪನ್ಮೂಲ ಇಲಾಖೆಯ ವತಿಯಿಂದ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವೆಷ್ಟು? ಖರ್ಚು ಮಾಡಲಾದ ಹಣವೆಷ್ಟು? ಕೈಗೊಳ್ಳಲಾಗಿರುವ ಕಾಮಗಾರಿಗಳಾವುವು? ಸದರಿ ಕಾಮಗಾರಿಗಳು ಪ್ರಸ್ತುತ ಯಾವ ಹಂತದಲ್ಲಿವೆ? ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಕಾಲಮಿತಿಯನ್ನೇನಾದರೂ ನಿಗದಿಪಡಿಸಿದೆಯೇ? ಯಾವ ಕಾಲ ಮಿತಿಯೊಳಗೆ ಪೂರ್ಣಗೊಳಿಸಲಾಗುವುದು. ಸದರಿ ಕಾಮಗಾರಿಗಳು ಪ್ರಸ್ತುತ ಯಾವ ಹಂತದಲ್ಲಿವೆ? ಎಂಬ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವ ಡಿ.ಕೆ. ಶಿವಕುಮಾರ ಅವರು, ಎಸ್‍ಸಿಪಿ ಟಿಎಸ್‍ಪಿ ಅಧಿನಿಯಮ 2013 ರಂತೆ ರಚನೆಯಾದ ಎಸ್‍ಸಿ, ಎಸ್‍ಟಿ ಅಭಿವೃದ್ಧಿ ಪರಿಷತ್ತಿನಿಂದ ಕಳೆದ ಸೆ.28 ರಂದು ಜರುಗಿದ ಸಭೆಯಲ್ಲಿ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯು ಅನುಮೋದನೆಯಾಗಿದೆ ಎಂದು ಹೇಳಿದರು.
ಅಂದಾಜು ಪಟ್ಟಿಗಳು ತಯಾರಿಕಾ ಹಂತದಲ್ಲಿದ್ದು, ಕಾಮಗಾರಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಕೆ.ಟಿ.ಪಿ.ಪಿ ನಿಯಮಾವಳಿಗಳಂತೆ ಟೆಂಡರ್ ಕರೆದು ಗುತ್ತಿಗೆ ವಹಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಿ.ಕೆ. ಶಿವಕುಮಾರ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.