RNI NO. KARKAN/2006/27779|Thursday, November 7, 2024
You are here: Home » breaking news » ಖಾನಾಪುರ:ಅಳಿವಿನಂಚಿನಲ್ಲಿರುವ ಕಂಬಳಿ ಕರಿಕಟ್ಟುವ ಕಲೆ ಮತ್ತು ಕಸಬುದಾರರು

ಖಾನಾಪುರ:ಅಳಿವಿನಂಚಿನಲ್ಲಿರುವ ಕಂಬಳಿ ಕರಿಕಟ್ಟುವ ಕಲೆ ಮತ್ತು ಕಸಬುದಾರರು 

ಅಳಿವಿನಂಚಿನಲ್ಲಿರುವ ಕಂಬಳಿ ಕರಿಕಟ್ಟುವ ಕಲೆ ಮತ್ತು ಕಸಬುದಾರರು

ವಿಶೇಷ ವರದಿ : ಕಾಶೀಮ ಹಟ್ಟಿಹೋಳಿ

ದಶಕಗಳ ಹಿಂದೆ ನಾಡಿನ ಸುತ್ತ ಇದ್ದ ದಟ್ಟ ಕಾಡು ಇಂದು ಸ್ವಾರ್ಥಿಗಳ ಹಾವಳಿ  ಮತ್ತು ಅರಣ್ಯ ಇಲಾಖೆಗಳ ಬಿಗು ನಿಲುವಿನ ಕೊರತೆಯಿಂದ ಕಾಡು ಕಳ್ಳಕಾಕರ ಪಾಲಾಯಿತು. ಕಾಡಿಲ್ಲದ ನಾಡು ಬರದ ಬೀಡಾಯಿತು. ಮಳೆಯ ಪ್ರಮಾಣ ಅಪಾರ ಪ್ರಮಾಣದಲ್ಲಿ ಕಡಿಮೆ ಆಯಿತು. ಕಂಬಳಿ ಉಪಯೋಗಿಸುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಕುಗ್ಗಿತು. ಖರೀದಿ ಕಡಿಮೆಯಾಗಿ ಕಂಬಳಿ ವ್ಯಾಪಾರ ಕುಸಿಯಿತು. ಶತಮಾನಗಳಿಂದ ಕಂಬಳಿಗಳಿಗೆ ಕರಿಕಟ್ಟುವ ಉದ್ಯೋಗ ಪೀಳಿಗೆಯಿಂದ ಪೀಳಿಗೆಗೆ ಬಳುವಳಿಯಾಗಿ ಸಾಗಿ ಮುಂದುವರಿಯುತ ಬಂತು. ಆದರೆ ಇತ್ತೀಚಿನ ದಿನಗಳಲ್ಲಿ ಕರಿಕಟ್ಟುವ ಕಲೆಯನ್ನು ಹೊಸ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಮನೋಭಾವ ಇಲ್ಲ. ಆಧುನಿಕತೆಯ ಕರಾಳಹಸ್ತಕ್ಕೆ ಸಿಕ್ಕು ಸಾಂಪ್ರದಾಯಿಕ ಕಲೆಗಳು ನಿರ್ನಾಮಗೊಳ್ಳುತ್ತಿವೆ. ಕರಿಕಟ್ಟಿದ ಕಂಬಳಿ  ಸ್ವಾಮಿಗಳಿಗೆ ಗದ್ದುಗೆ ಹಾಸಲು ಯೋಗ್ಯ ಎಂಬ  ಸಂಪ್ರದಾಯ ನಡೆದುಕೊಂಡು ಬಂದಿದೆ. ಆದ್ದರಿಂದ ವರ್ಷಗಳಿಂದ ಕರಿಕಟ್ಟುವ ಕಸಬುದಾರರಿಗಾಗಿ ರೈತರು ಚಾತಕಪಕ್ಷಿಯಂತೆ ಕಾಯುತ್ತಿರುವ ಸಂದರ್ಭದಲ್ಲಿಯೇ  ಗಡಿ ಗ್ರಾಮಗಳಾದ ಕಕ್ಕೇರಿ, ಲಿಂಗನಮಠ,ಭೂರಣಕಿ,ಹುಲಿಕೇರಿ ಗ್ರಾಮಗಳತ್ತ ಮುಖಮಾಡಿ “ಕಂಬಳಿ ಕರಿಕಟ್ಟೂ” ಎಂಬ ಧ್ವನಿ ಕೇಳುತ್ತಿದ್ದಂತೆ ಗ್ರಾಮಸ್ಥರು ಓಣಿಗೆ ಓಡಿ ಬಂದು ಒಂದು ಕಂಬಳಿಗೆ ಕರಿಕಟ್ಟಲು “ಎಷ್ಟು ರೂಪಾಯಿ ರೇಟು?” ಎಂದು ಕೇಳಿ,೨೫೦ ರೂ.ಗಳಿಗೊಂದು ಕಂಬಳಿಗೆ ಕರಿಕಟ್ಟಲು ನಿರ್ಧರಿಸಿ, ಸುಮಾರು ಸಂಖ್ಯೆಯ ಕಂಬಳಿಗೆ ಸುಂದರವಾಗಿ ಕರಿ ಕಟ್ಟುವ ಕೆಲಸ ನಡೆಯಿತು.

ಹುಬ್ಬಳ್ಳಿ ಸಮೀಪ ಉಣಕಲ್ಲ ಗ್ರಾಮದ ಸಾಯಿ ನಗರದಲ್ಲಿ ವಾಸವಾಗಿರುವ ಲಕ್ಷ್ಮಣ ಶಿಳ್ಳಿಕೇತರ(೬೦),ಬಾಳವ್ವ ಶಿಳ್ಳಿಕೇತರ(೭೦) ಮತ್ತು ದ್ಯಾಮವ್ವ ಶಿಳ್ಳಿಕೇತರ(೬೫) ಇವರ ಉದ್ಯೋಗ ಕಂಬಳಿ ಮಾರಾಟ ಮಾಡುವುದು ಮತ್ತು ಕಂಬಳಿಗಳಿಗೆ ಬಣ್ಣ-ಬಣ್ಣದ ಉಲನ್ ದಾರದಿಂದ ೪ ಎಳೆ ಹಾಗೂ ೮ ಎಳೆಗಳನ್ನು ಉಪಯೋಗಿಸಿ ಕಂಬಳಿಯ ಎರಡೂ ಅಂಚುಗಳಿಗೆ ಎಳೆ-ಎಳೆಯಾಗಿ ಬಿಚ್ಚಿರುವ ಭಾಗಕ್ಕೆ  ಅಂಚು ಬಿಚ್ಚಿ ಹರಿದುಹೋಗದಂತೆ ಭದ್ರವಾಗಿ ಹೆಣೆದು ಕಂಬಳಿಯ ಕರಿ ಕಟ್ಟಿ,ಸೌಂದರ್ಯ ಮತ್ತು ಅದರ ಬಾಳಿಕೆ ಹೆಚ್ಚಿಸಲು ಸಾಧ್ಯ ಮಾಡಿದರು. ಅಲ್ಲದೆ ಕರಿಕಟ್ಟಿದ ಕಂಬಳಿ ಪೂಜೆಯಲ್ಲಿ ಸ್ವಾಮಿಗಳಿಗೆ ಗದ್ದುಗೆ ಹಾಸಲು ಉಪಯೋಗಿಸಲು ಯೋಗ್ಯವಾಗುವುದು.

ಈ ಕಸಬಿನೊಂದಿಗೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹಚ್ಚಿ ಬೊಟ್ಟು ಚುಚ್ಚುವ ಕಾಯಕವನ್ನು ಇವರು ನಡೆಸಿಕೊಂಡು ಬರುತ್ತಿದ್ದಾರೆ.

ಆದರೆ ಈ ಕಸಬುದಾರರ ಬದುಕು ಮಾತ್ರ ಕೇಳುವವರಿಲ್ಲದೇ  ಬೀದಿಪಾಲಾಗಿದೆ. ಇವರ ಕಸಬಿಗೆ ಸರಕಾರದಿಂದ ಯಾವುದೇ ಸಹಾಯ ಸಹಕಾರ ಇಲ್ಲದಾಗಿದೆ. ಕಂಬಳಿ ಮಾರುವ ಮತ್ತು ಕರಿಕಟ್ಟುವ ಕಾಯಕ ನಿರತ ಈ ಜನಾಂಗಕ್ಕೆ ಮನೆ ನಿರ್ಮಿಸಲು ನಿವೇಶನ,ಮನೆ ನಿರ್ಮಾಣಕ್ಕೆ ಧನಸಹಾಯ, ಉದ್ಯೋಗ ಸುಸೂತ್ರ ನಡೆಸಲು ಆರ್ಥಿಕ ನೆರವು, ಸಣ್ಣ-ಸಣ್ಣ ಅಂಗಡಿಗಳನ್ನು ತೆರೆಯಲು ಸಹಾಯ ಸರಕಾರ ಒದಗಿಸಿದರೆ ಬಡತನದ ಬೇಗೆಯಿಂದ ಹೊರ ಬರುವ ಇವರು ನೆಮ್ಮದಿಯ ಬದುಕು ಸಾಗಿಸಬಹುದು ಹಾಗೂ ಕಂಬಳಿ ಉದ್ಯೋಗ ಅದರಂತೆ ಕರಿಕಟ್ಟುವ ಈ ಕಲೆ ಬದುಕಿ ಉಳಿಯಲು, ಜೀವನ ನಿರ್ವಣೆಗೆ ಸಾಧ್ಯವಾಗುತ್ತಿದೆ.

ಇವರು ಹೊಟ್ಟೆ ಉಪಜೀವನಕ್ಕಾಗಿ ನವಲಗುಂದ, ನರಗುಂದ, ಹೆಬ್ಬಳ್ಳಿ, ಮಾರಡಗಿ, ಜಾವೂರ, ಕಿರೆಸೂರ, ಕಲಘಟಗಿ, ಹುಲ್ಲೂರ, ಮುಕ್ಕಲ್ ಲ, ತಾವರಗೇರಿ, ಕೆಳಮಟ್ಟಿ, ಮಿಶ್ರಿಕೋಟೆ, ಗಳಗಿ-ಹುಲಕೊಪ್ಪ, ದುಮ್ಮವಾಡ, ಕಕ್ಕೇರಿ, ಲಿಂಗನಮಠ, ಚುಂಚವಾಡ, ಭೂರಣಕಿ, ಹುಲಿಕೇರಿ ಮುಂತಾದ ಅನೇಕ ಗ್ರಾಮಗಳಿಗೆ ಉದ್ಯೋಗ ಅರಸಿ ಸಂಚರಿಸುತ್ತಾರೆ. ಇಂಥ ಇಳಿವಯಸ್ಸಿನಲ್ಲಿಯೂ ಬದುಕು ಸಾಗಿಸಲು ಪರದಾಡುವ ಪರಿಸ್ಥಿತಿ ಇವರದಾಗಿದೆ. ಈ ಕಲೆ ಮುಂದುವರಿಸಲು ಹೊಸಪೀಳಿಗೆ ಮನಸ್ಸು ಮಾಡುತ್ತಿಲ್ಲ. ಪಟ್ಟಣಗಳಿಗೆ ಉದ್ಯೊಗ ಅರಸಿ ಸಾಗುತ್ತಿರುವುದು ಸಾಮಾನ್ಯವಾಗಿದೆ. ಅನೇಕ ಯುವಕರು ನಿರುದ್ಯೋಗಿಗಳಾಗಿ ಅಲೆದಾಡುವಂತ ಪರಿಸ್ಥಿತಿ ಇವರದಾಗಿದೆ. ಆದ್ದರಿಂದ ಇವರಿಗೆ ಉದ್ಯೋಗ ಮತ್ತು ಆರ್ಥಿಕ ಸಹಾಯ ಒದಗಿಸಬೆಕು ಎಂದು ಇವರು ಅಂಗಲಾಚುತ್ತಿದ್ದಾರೆ.

“ನಾವು ದಶಕಗಳಿಂದ ಕಂಬಳಿ ಮಾರುವ,ಕರಿಕಟ್ಟುವ ಕಸಬು ಮಾಡುತ್ತ ಬಂದಿದ್ದೇವೆ.ಆದರೆ ನಮಗೆ ಬಡತನ ತಪ್ಪಿಲ್ಲ. ಸರಕಾರದ ಯಾವುದೇ ದನಸಹಾಯ, ಸವಲತ್ತುಗಳು ನಮಗೆ ದೊರೆತಿಲ್ಲ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಲು ನಮ್ಮ ಕಣ್ಣೀರು ಕಪಾಳಕ್ಕೆ ಬರುತ್ತವೆ.ಹೆಣ್ಣು ಮಕ್ಕಳ ಮದುವೆ ಮಾಡಲು ಸಾಲ-ಶೂಲ ಮಾಡಿ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ನಮ್ಮತ್ತ ಕಣ್ಣು ಹರಿಸಿ ನಮ್ಮನ್ನು ಉದ್ಧರಿಸಲು ಸರಕಾರ ಮನಸ್ಸು ಮಾಡಬೇಕು. ನಮ್ಮ ಕಣ್ಣೀರು ಒರೆಸುವ ಕೆಲಸ ಮಾಡಬೇಕು.”

 

*ಲಕ್ಷ್ಮಣ ಶಿಳ್ಳಿಕೇತರ*: ಕಂಬಳಿ ಮಾರಾಟಗಾರ,ಉಣಕಲ್ಲ(ಹುಬ್ಬಳ್ಳಿ)

“ನಾವು ಸಾಯೋ ವಯಸ್ಸಿನ್ಯಾಗೂ ದುಡಿಯಬೆಕಾಗೇದ,ಕಂಬಳಿ ಮಾರೋದು,ಕರಿಕಟ್ಟೋದು,ಹೆಣ್ಣಮಕ್ಕಳಿಗೆ ಹಚ್ಚಿ ಚುಚ್ಚಿ ಬಂದ ಅಲ್ಪ-ಸ್ವಲ್ಪ ದುಡ್ಡಿನ್ಯಾಗ ಜೀವನಾ ಸಾಗಸಬೇಕರಿ,ಮಕ್ಕಳ ಮದುವೆಗೆ ಸಾಲಾನೂ ಯಾರು ಕೊಡಾದಿಲ್ಲ.ಮಕ್ಕಳು ಮರಿ ಸಾಕಾಕ ನಮಗ ಸರಕಾರದವರು ಹಣದ ಸಹಾಯ ಮಾಡ ಬೇಕು ಅಂದರ ನಾವು ಬದಕತೆವರಿ.”

 

*ಬಾಳವ್ವ ಶಿಳ್ಳಿಕೇತರ*, ಹಚ್ಚಿ ಚುಚ್ಚುವ ಮತ್ತು ಕರಿ ಕಟ್ಟುವ ಕೆಲಸಗಾರ್ತಿ,ಉಣಕಲ್ಲ,(ಹುಬ್ಬಳ್ಳಿ)

Related posts: