ಗೋಕಾಕ:ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ
ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ
ಗೋಕಾಕ ಜ 26 : ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣ ತೆತ್ತ ಹೋರಾಟಗಾರರನ್ನು ಸ್ಮರಿಸಿ, ಅವರಿಗೆ ಶ್ರದ್ಧಾ ಭಕ್ತಿಯ ಗೌರವ ಅರ್ಪಿಸಬೇಕೆಂದು ಎನ್‍ಎಸ್‍ಎಫ್ ಅತಿಥಿ ಗೃಹದ ಲಕ್ಕಪ್ಪ ಲೋಕುರಿ ಹೇಳಿದರು.
ಇಲ್ಲಿಯ ಹೊಸಪೇಟ ಗಲ್ಲಿಯಲ್ಲಿರುವ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಲಯದ ಆವರಣದಲ್ಲಿ ಶನಿವಾರದಂದು ಜರುಗಿದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಪುರುಷರ ತ್ಯಾಗ, ಬಲಿದಾನದ ಋಣ ತೀರಿಸಲು ನಾವೆಲ್ಲರೂ ನಮ್ಮ ಕರ್ತವ್ಯ ನಿರ್ವಹಿಸಬೇಕು. ಪ್ರಪಂಚದಲ್ಲಿಯೇ ಅತೀ ದೊಡ್ಡದಾದ ಸಂವಿಧಾನ ರಚಿಸಿದ ಕೀರ್ತಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಸಲ್ಲುತ್ತದೆ. ಅಂಬೇಡ್ಕರರು ಅತ್ಯಧಿಕ ಹಕ್ಕುಗಳನ್ನು ಆಧರಿಸಿ ರಚನೆ ಮಾಡಿರುವ ಲಿಖಿತ ಸಂವಿಧಾನ ನಮ್ಮ ದೇಶವು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಅವರು ವಿಶ್ವದ ಅಮೂಲ್ಯ ರತ್ನ ಎಂದು ಲೋಕುರಿ ಶ್ಲಾಘಿಸಿದರು.
ಯುವ ಧುರೀಣ ನಾಗಪ್ಪ ಶೇಖರಗೋಳ ಅವರು, ಮಹಾತ್ಮಾಗಾಂಧೀಜಿ ಹಾಗೂ ಡಾ.ಅಂಬೇಡ್ಕರ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.
ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಎನ್‍ಎಸ್‍ಎಫ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ. ಮೇಟಿ, ಎನ್‍ಎಸ್‍ಎಫ್ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಎ.ಜಿ. ಕೋಳಿ, ಚನ್ನಮಲ್ಲಿಕಾರ್ಜುನ ಯಕ್ಷಂಬಿ, ಅಬ್ದುಲ ಮಿರ್ಜಾನಾಯ್ಕ, ದೊಡ್ಡಪ್ಪ ಹುಲಕುಂದ, ಬಿಎಲ್‍ಜೆ ಟ್ರಸ್ಟ್ ಸಿಬ್ಬಂದಿ, ಶಿಕ್ಷಕ-ಶಿಕ್ಷಕೀಯರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.