ಗೋಕಾಕ:ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ : ಡಾ: ಗುರುಪಾದ ಮರಿಗುದ್ದಿ
ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ : ಡಾ: ಗುರುಪಾದ ಮರಿಗುದ್ದಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 4 :
ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ ಎಂದು ವಿಮರ್ಶಕ ಡಾ: ಗುರುಪಾದ ಮರಿಗುದ್ದಿ ಹೇಳಿದರು.
ಅವರು ರವಿವಾರದಂದು ನಗರದ ಬಸವ ಮಂದಿರದಲ್ಲಿ ಪ್ರೊ: ಮಹಾನಂದಾ ಪಾಟೀಲರ “ವಿಮರ್ಶಾ ವಿವೇಕದ ದಾರಿ” ಮತ್ತು “ನನ್ನೋಳಗಿನ ಬುದ್ಧ” ಎಂಬ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಸಾಹಿತಿಗಳನ್ನು ಕಲಾವಿದರನ್ನು ಗೌರವ ಆದರದಿಂದ ಕಾಣಬೇಕು. ಪುಸ್ತಕಗಳು ಸಮಾಜದಲ್ಲಿ ಪರಿವರ್ತನೆ ತರುತ್ತವೆ. ಯುವ ಬರಹಗಾರರು ಇದನ್ನು ಅರಿತು ತಮ್ಮ ಬರಹವನ್ನು ಜವಾಬ್ದಾರಿಯಿಂದ ಮಾಡಬೇಕು. ಪ್ರಶಸ್ತಿ ಬಹುಮಾನಗಳು ಸಾಹಿತ್ಯದ ಶ್ರೇಷ್ಠತೆಯನ್ನು ನಿರ್ಧರಿಸುವುದಿಲ್ಲ. ನಮ್ಮ ಪರಂಪರೆಯನ್ನು ತಿಳಿದುಕೊಂಡು ಇಂದಿನ ವಾಸ್ತವತೆ ಅರ್ಥ ಮಾಡಿಕೊಂಡು ಬರೆಯಬೇಕಾಗುತ್ತದೆ ಎಂದರು.
ಡಾ: ಅಶೋಕ ನರೋಡೆ ಅವರು ವಿಮರ್ಶಾ ವಿವೇಕದ ದಾರಿ ಕುರಿತು ಪರಿಚಯ ನೀಡಿದರು. ಹಮೀದಾ ದೇಸಾಯಿ ನನ್ನೋಳಗಿನ ಬುದ್ಧ ಕೃತಿಯನ್ನು ಪರಿಚಯಿಸಿದರು. ಲೇಖಕಿ ಮಹಾನಂದಾ ಪಾಟೀಲ ಅವರು ಬರವಣಿಗೆಯ ತಮ್ಮ ಅನುಭವ ಆತಂಕಗಳನ್ನು ವಿವರಿಸಿ ಮಹಿಳೆಯರು ಬರಹಕ್ಕೆ ಪ್ರೋತ್ಸಾಹ ಅಗತ್ಯ ಎಂದರು.
ಎರಡು ಕೃತಿಗಳನ್ನು ಶ್ರೀಮತಿ ಅನುಸೂಯಾ ಪಾಟೀಲ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾದ ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳ್ಳಿ, ಬಸವಮಂದಿರ ಸತ್ಸಂಗ ಸಮಿತಿ ಅಧ್ಯಕ್ಷ ಬಿ.ಎಸ್.ಪಂಡಿತ, ಎಲ್‍ಇಟಿ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ, ಪ್ರೋ: ಚಂದ್ರಶೇಖರ ಅಕ್ಕಿ, ಡಾ| ಸಿ.ಕೆ.ನಾವಲಗಿ, ಜಿ.ವಿ.ಮಳಗಿ, ಶಕುಂತಲಾ ದಂಡಗಿ, ಪುಷ್ಪಾ ಮುರಗೋಡ ಇದ್ದರು.
ಪ್ರಕಾಶ ಪಾಟೀಲ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು. ಶಿವಲೀಲಾ ಪಾಟೀಲ ವಂದಿಸಿದರು.