ಗೋಕಾಕ:ಕಲ್ಮಡ್ಡಿ ಏತ ನೀರಾವರಿ ಯೋಜನೆ ಅನುಷ್ಠಾನ : ಶಾಸಕ ಬಾಲಚಂದ್ರ ಜಾರಕಿಹೊಳಿ ಫುಲ್ ಖುಷ್.
ಕಲ್ಮಡ್ಡಿ ಏತ ನೀರಾವರಿ ಯೋಜನೆ ಅನುಷ್ಠಾನ : ಶಾಸಕ ಬಾಲಚಂದ್ರ ಜಾರಕಿಹೊಳಿ ಫುಲ್ ಖುಷ್.
190 ಕೋಟಿ ರೂ. ವೆಚ್ಚ, 3900 ಹೆಕ್ಟರ್ ಪ್ರದೇಶ ನೀರಾವರಿ, ಕೌಜಲಗಿ ಭಾಗದ ರೈತರಿಗೆ ಬಜೆಟ್‍ನಲ್ಲಿ ಬಂಪರ್
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 8 :
ಶುಕ್ರವಾರದಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿರುವ ರಾಜ್ಯ ಆಯವ್ಯಯದಲ್ಲಿ ತಾಲೂಕಿನ ಕೌಜಲಗಿ-ಗೋಸಬಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜಮೀನುಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿರುವುದಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೌಜಲಗಿ ಮತ್ತು ಸುತ್ತಲಿನ ಗ್ರಾಮಗಳ ರೈತರ ಕೋರಿಕೆಯ ಮೇರೆಗೆ ಕಲ್ಮಡ್ಡಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹಲವು ವರ್ಷಗಳಿಂದ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿ ರೈತರಿಗೆ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಈ ಯೋಜನೆ ಅನುಷ್ಠಾನದಿಂದ ಕೌಜಲಗಿ, ಗೋಸಬಾಳ, ಬಿಲಕುಂದಿ, ಬಗರನಾಳ, ಮನ್ನಿಕೇರಿ ಹಾಗೂ ಸವದತ್ತಿ ತಾಲೂಕಿನ ದಾಸನಾಳ ಗ್ರಾಮಗಳ ರೈತ ಸಮುದಾಯಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಸುಮಾರು 190 ಕೋಟಿ ರೂ. ವೆಚ್ಚದ ಈ ಕಾಮಗಾರಿ ಅನುಷ್ಠಾನದಿಂದಾಗಿ 3900 ಹೆಕ್ಟರ್ ಪ್ರದೇಶ ನೀರಾವರಿ ಆಗಲಿದೆ ಎಂದು ಅವರು ಹೇಳಿದ್ದಾರೆ.
ಅರಭಾವಿ ಮತಕ್ಷೇತ್ರಕ್ಕೆ ಒಳಪಟ್ಟಿರುವ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಇಂದಿನ ಆಯವ್ಯಯದಲ್ಲಿ ಮಂಜೂರಾತಿ ನೀಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ಧರಾಮಯ್ಯ, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಅರಣ್ಯ ಮತ್ತು ಪರಿಸರ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಸಮಸ್ತ ರೈತ ಬಾಂಧವರ ಪರವಾಗಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದ್ದಾರೆ.