ಗೋಕಾಕ:ಕಲ್ಮಡಿ ಏತ ನೀರಾವರಿ ಯೋಜನೆ ಕುಮಾರಸ್ವಾಮಿ ಅವರು ಈ ಭಾಗದ ರೈತರಿಗೆ ನೀಡಿದ ಗೌರವವಾಗಿದೆ : ಪರಮೇಶ್ವರ
ಕಲ್ಮಡಿ ಏತ ನೀರಾವರಿ ಯೋಜನೆ ಕುಮಾರಸ್ವಾಮಿ ಅವರು ಈ ಭಾಗದ ರೈತರಿಗೆ ನೀಡಿದ ಗೌರವವಾಗಿದೆ : ಪರಮೇಶ್ವರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 8 :
ಕೌಜಲಗಿ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ಕಲ್ಮಡಿ ಏತ ನೀರಾವರಿ ಯೋಜನೆಗೆ ಬಜೆಟ್‍ನಲ್ಲಿ ಅನುಮೋದನೆ ನೀಡಿದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಭಾಗದ ರೈತರಿಗೆ ನೀಡಿದ ಗೌರವವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಈ ಯೋಜನೆಯ ಜಾರಿಯಿಂದ ಕೌಜಲಗಿ, ಗೋಸಬಾಳ, ಬಿಲಕುಂದಿ, ಬಗರನಾಳ, ಮನ್ನಿಕೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಕನಸು ಈಡೇರಿದಂತಾಗಿದೆ ಎಂದು ಹೇಳಿದ್ದಾರೆ.
ಕೌಜಲಗಿ ಮತ್ತು ಸುತ್ತಲಿನ ಗ್ರಾಮಗಳ ರೈತರ ಕೋರಿಕೆಯ ಮೇರೆಗೆ ಕಲ್ಮಡ್ಡಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹಲವು ವರ್ಷಗಳಿಂದ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಿ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕಾರ್ಯ ಶ್ಲಾಘನೀಯವಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಈ ಯೋಜನೆಗಾಗಿ ಒತ್ತಡ ಹಾಕುತ್ತಾ ಬಂದಿದ್ದು ಈಗ ರೈತರಿಗೆ ವರದಾನವಾಗಿದೆ. ಸುಮಾರು 190 ಕೋಟಿ ರೂ. ವೆಚ್ಚದ ಈ ಕಾಮಗಾರಿ ಅನುಷ್ಠಾನದಿಂದಾಗಿ 3900 ಹೆಕ್ಟರ್ ಪ್ರದೇಶ ನೀರಾವರಿ ಆಗಲಿದೆ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಇಂದಿನ ಆಯವ್ಯಯದಲ್ಲಿ ಮಂಜೂರಾತಿ ನೀಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ಧರಾಮಯ್ಯ, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಅರಣ್ಯ ಮತ್ತು ಪರಿಸರ ಸಚಿವ ಸತೀಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೌಜಲಗಿ ಭಾಗದ ರೈತ ಬಾಂಧವರ ಪರವಾಗಿ ಹೊಸಮನಿ ಅವರು ಅಭಿನಂದಿಸಿದ್ದಾರೆ.