ಮೂಡಲಗಿ:ಸುಗಮವಾಗಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆ : ಡಿಡಿಪಿಐ ಎಮ್ ಜಿ ದಾಸರ ಮಾಹಿತಿ
ಸುಗಮವಾಗಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆ : ಡಿಡಿಪಿಐ ಎಮ್ ಜಿ ದಾಸರ ಮಾಹಿತಿ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 21 :
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 8 ವಲಯ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿಯ ಪ್ರಥಮ ಭಾಷೆಯ ಪರೀಕ್ಷೆಯು ಸುಗಮವಾಗಿ ಜರುಗಿತು. ಶೈಕ್ಷಣಿಕ ಜಿಲ್ಲೆಯಲ್ಲಿ 39351 ವಿದ್ಯಾರ್ಥಿಗಳಲ್ಲಿ 38518 ವಿದ್ಯಾರ್ಥಿಗಳು ಹಾಜರಾಗಿ 833 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಚಿಕ್ಕೋಡಿ ಡಿಡಿಪಿಐ ಎಮ್ ಜಿ ದಾಸರ ತಿಳಿಸಿದರು.
ಅವರು ಪಟ್ಟಣದ ಶ್ರೀ ಶಿವಬೋಧ ರಂಗ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಬೇಟಿ ನೀಡಿ ಬಿ.ಇ.ಒ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶೈಕ್ಷಣಿಕ ಜಿಲ್ಲೆಯಲ್ಲಿ ಸತತ ಪ್ರಯತ್ನ ಹಾಗೂ ವಿದ್ಯಾರ್ಥಿಗಳ ಶ್ರಮದ ಪ್ರತೀಕವಾಗಿ ಶೈಕ್ಷಣಿಕ ವರ್ಷಾರಂಭದಿಂದಲು ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲಾ, ತಾಲೂಕು, ಸಮೂಹ ಹಾಗೂ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೋಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರಥಮ ಬಾರಿ ಅಕ್ಷರ ಬಂಡಿ ಶಿಕ್ಷಣ ಜಾತ್ರೆ, ಪ್ರತಿ ತಾಲೂಕಿನಲ್ಲಿ ಮುಖ್ಯೋಪಾಧ್ಯಾಯರಿಗೆ ಪ್ರೇರಣಾ ಕಾರ್ಯಾಗಾರ, ವರ್ಗ ವಾಪ್ತಿಯಲ್ಲಿ ವಿಷಯಾದರಿತ ರಸ ಪ್ರಶ್ನೆ ಕಾರ್ಯಕ್ರಮ, ಮನಸ್ಸನ್ನು ಉಲ್ಲಾಸಗೊಳಿಸಲು ಬ್ರಾಹ್ಮರೀ ಓಂಕಾರ ಉಪಾಸನ, ವಿಶ್ವಾಸ ಕಿರಣ, ಗುಂಪು ಅಧ್ಯಯನ, ಸ್ವಯಂ ಕಲಿಕೆಯಂತಹ ಶೈಕ್ಷಣಿಕವಾಗಿ ಉಪಯೊಗವಾಗುವ ಕಾರ್ಯಗಳನ್ನು ಮಾಡಲಾಗಿದೆ.
ಶೈಕ್ಷಣಿಕ ಜಿಲ್ಲೆಯಲ್ಲಿ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ರಾತ್ರಿ ವ್ಯಾಸಂಗ ಮಾಡುವಾಗ ಖುದ್ದಾಗಿ ಬೇಟಿ ನೀಡಿ ಖಚಿತ ಪಡಿಸಿಕೊಂಡಿದೆ. ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಪ್ರೌಢ ಶಾಲೆಗಳಿಗೆ ಬೇಟಿ ನೀಡಿ ಪ್ರತ್ಯಕ್ಷ ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ವಿಷಯಕ್ಕೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ಶೈಕ್ಷಣಿಕ ಜಿಲ್ಲೆಯಲ್ಲಿ ನಕಲು ರಹಿತ ಪರೀಕ್ಷೆ ನಡೆಸಲು ಪರೀಕ್ಷಾ ಮಂಡಳಿ ನೀಡಿರುವ ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದೆ. ಮೂಡಲಗಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಕಾರ್ಯಾಗಾರಗಳು ಹಾಗೂ ಮಾರ್ಗದರ್ಶನ ಬೇಟಿಯ ಕಾರ್ಯಕ್ರಮಗಳು ಜರುಗಿವೆ ಎಂದು ನುಡಿದರು.
ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 6135 ವಿದ್ಯಾರ್ಥಿಗಳಲ್ಲಿ 104 ವಿದ್ಯಾರ್ಥಿಗಳು ಗೈರಾಗಿ 6031 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 18 ಪರೀಕ್ಷಾ ಕೇಂದ್ರಗಳಲ್ಲಿ ಸುವ್ಯವಸ್ಥಿತ ರೀತಿಯಲ್ಲಿ ಪರೀಕ್ಷೆಗಳು ಸುಗಮವಾಗಿ ಪ್ರಾರಂಭವಾಗಿವೆ. ಶಾಲಾ ಪ್ರಾರಂಭದಿಂದ ವಲಯದಲ್ಲಿ ಪರೀಕ್ಷಾ ಫಲಿತಾಂಶ ಸುಧಾರಣೆ, ವಿದ್ಯಾರ್ಥಿಗಳ ಜ್ಞಾನದ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮೇಲಾಧಿಕಾರಿಗಳ, ಹಿರಿಯ ನೂರಿತ ವಿಷಯ ಶಿಕ್ಷಕರಿಂದ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ಪರೀಕ್ಷಾ ಬಿಡುವಿನ ಸಮಯದಲ್ಲಿ ವಿಶೇಷ ತರಗತಿಗಳನ್ನು ಮೂಡಲಗಿ ವಲಯದಲ್ಲಿ ಪದವಿಧರ ಶಿಕ್ಷಕರಿಂದ ಆಯೋಜಿಸಲಾಗಿದೆ ಎಂದು ಹೇಳಿದರು.
ಮೂಡಲಗಿ ವಲಯ ವ್ಯಾಪ್ತಿಯ ಮೂಡಲಗಿ, ಪಟಗುಂದಿ, ಸುಣಧೋಳಿ ಪರೀಕ್ಷಾ ಕೇಂದ್ರಗಳಿಗೆ ಬಿ.ಇ.ಒ ಎ.ಸಿ ಮನ್ನಿಕೇರಿ ಬೇಟಿ ನೀಡಿ ಪರಿಶೀಲಿಸಿದರು. ಲೋಕೋಪಯೊಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಎ ಗಾಣಿಗೇರ, ರೇಷ್ಮೇ ಇಲಾಖೆಯ ಎಸ್.ಬಿ ಹುಲ್ಲೋಳ್ಳಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಮ್.ಎಲ್. ಜನಮಟ್ಟಿ ವಿಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎಸ್.ಎಲ್.ಸಿ ಜಿಲ್ಲಾ ನೋಡಲ್ ಟಿ.ಟಿ ನಡಕರ್ಣಿ, ಜಿಲ್ಲಾ ಮಹಿಳಾ ಜಾಗೃತ ದಳದ ವಿ.ಬಿ ಡೊಂಗರೆ, ತಾಲೂಕಾ ನೋಡಲ್ ಎಸ್.ಎ ನಾಡಗೌಡರ, ಇಸಿಒ ಟಿ ಕರಿಬಸವರಾಜು, ಬಿ.ಆರ್.ಸಿ ಬಿ.ಎಚ್ ಮೋರೆ, ಬಿ.ಆರ್.ಪಿ ಕೆ.ಎಲ್.ಮೀಶಿ, ಬಿ.ಎಮ್ ನಂದಿ, ಪಿ.ಜಿ ಪಾಟೀಲ, ಉಪಸ್ಥಿತರಿದ್ದರು. ವಲಯ ವ್ಯಾಪ್ತಿಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆಸನ, ವೈದ್ಯಕೀಯ, ಸಿ.ಸಿ ಕ್ಯಾಮರ್, ಅಗತ್ಯ ಪೋಲಿಸ್ ಸಿಬ್ಬಂದಿಯಿಂದ ಸೂಕ್ತ ಬಂದೋಬಸ್ತ ಸಹಾಯ ಪಡೆದುಕೊಂಡಿದ್ದರು.