RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಕಲ್ಮಡ್ಡಿ ಏತ ನೀರಾವರಿ ರೈತರಿಗೆ ಸಂದ ಗೌರವ : ಪ್ರಕಾಶ ಕೋಟಿನತೋಟ

ಗೋಕಾಕ:ಕಲ್ಮಡ್ಡಿ ಏತ ನೀರಾವರಿ ರೈತರಿಗೆ ಸಂದ ಗೌರವ : ಪ್ರಕಾಶ ಕೋಟಿನತೋಟ 

ಕಲ್ಮಡ್ಡಿ ಏತ ನೀರಾವರಿ ರೈತರಿಗೆ ಸಂದ ಗೌರವ : ಪ್ರಕಾಶ ಕೋಟಿನತೋಟ

 

 

ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 2 :

 

ಕಲ್ಮಡ್ಡಿ ಏತ ನೀರಾವರಿ ಯೋಜನೆಯು ಸತತ 15 ವರ್ಷಗಳ ರೈತರ ಹೋರಾಟದ ಫಲವಾಗಿ ಮತ್ತು ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಸತತ ಪ್ರಯತ್ನದಿಂದಾಗಿ ಇಂದು ಅನುಷ್ಠಾನಗೊಂಡಿದ್ದು, ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಅನುದಾನ ಮಂಜೂರಾತಿ ಮಾಡಿಸಿದ ಶಾಸಕರಿಗೆ, ಕೌಜಲಗಿ ಸುತ್ತಲಿನ ರೈತರಿಗೆ ಹೋರಾಟ ಸಮಿತಿ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಇದು ಬೇಗ ಕಾರ್ಯಗತಗೊಳ್ಳಬೇಕೆಂದು ಸಮಸ್ತ ರೈತರ ಪರವಾಗಿ ಅರಭಾವಿ ಶಾಸಕರನ್ನು ಒತ್ತಾಯಿಸಲಾಗುವದೆಂದು ಕಲ್ಮಡ್ಡಿ ಏತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಪ್ರಕಾಶ ಕೋಟಿನತೋಟ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಬಸವೇಶ್ವರ ಪೇಟೆಯ ಡಿ.ಜಿ.ಭವನದಲ್ಲಿ ಜರುಗಿದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಮಾರು 12000 ಎಕರೆ ಭೂಮಿಗೆ ನಿರೂಣಿಸುವ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಕುರಿತು 2004 ರಲ್ಲಿ ಹೋರಾಟ ಸಮಿತಿ ಅಸ್ಥಿತ್ವಕ್ಕೆ ಬಂದಿತು. ಕೌಜಲಗಿ, ಗೋಸಬಾಳ, ಬಗರನಾಳ, ಮನ್ನಿಕೇರಿ, ಬಿಲಕುಂದಿ ಮುಂತಾದ ಗ್ರಾಮದ ರೈತರೆಲ್ಲರೂ ಸೇರಿ ಪ್ರಕಾಶ ಕೋಟಿನತೋಟ ಅವರ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಯಿತು. ಅಂದಿನ ಶಾಸಕ ವಿ.ಎಸ್.ಕೌಜಲಗಿ ಯವರಿಗೆ ಯೋಜನೆ ಕುರಿತು ಮನವರಿಕೆ ಮಾಡಲಾಯಿತಾದರೂ ಶಾಸಕ ಕೌಜಲಗಿಯವರು ಈ ಯೋಜನೆ ಅಸಾಧ್ಯವೆಂದು ತಿಳಿಸಿದರು. ಆದರೂ ನಮ್ಮ ಹೋರಾಟ ನಿರಂತರವಾಗಿತ್ತು. ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದ್ದೇವೆ. ಬೆಂಗಳೂರಿನವರೆಗೂ ಹೋರಾಟಗಾರರು ಹೋಗಿ ಪ್ರತಿಭಟನೆ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಸಮಸ್ತ ರೈತ ಬಾಂಧವರು ಬೆಂಬಲ ನೀಡಿದ್ದಾರೆ. ಅದರೊಂದಿಗೆ ಇಂದಿನ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಸತತ ಪ್ರಯತ್ನ ಪಟ್ಟಿದ್ದಾರೆ. ಶಾಸಕರ ಪ್ರಯತ್ನ, ನಮ್ಮ ಹೋರಾಟದ ಫಲವಾಗಿ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಸರಕಾರ 193 ಕೋಟಿ ಅನುದಾನ ಬಿಡುಗಡೆ ಮಾಡಿದ್ದನ್ನು ದಿನಾಂಕ: 08-03-2018 ರಂದು ಸರಕಾರ ಘೋಷಿಸಿದೆ. ಈ ಯೋಜನೆ ಬೇಗ ಅನುಷ್ಠಾನಗೊಂಡರೆ ಸಾಮಾನ್ಯ ಬಡರೈತರ ಬದುಕು ಹಸನವಾಗುತ್ತದೆ. ಇದರಿಂದ ಕೌಜಲಗಿ ಭಾಗ ಸಂಪೂರ್ಣವಾಗಿ ನೀರಾವರಿಯಾಗಿ ಸಮೃದ್ಧ ನಾಡಾಗುತ್ತದೆ. ರೈತರ ಬಹುದಿನದ ಇನ್ನೊಂದು ಬೇಡಿಕೆಯಾದ ಕೌಜಲಗಿ ತಾಲೂಕು ರಚನೆಗೂ ಇದು ಅನಕೂಲಕರ ವಾತಾವರಣ ನಿರ್ಮಿಸುತ್ತದೆ. ಆದುದರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಈ ಯೋಜನೆ ಬೇಗ ಕಾರ್ಯಗತಗೊಳಿಸಲು ಇನ್ನಷ್ಟು ಪ್ರಯತ್ನಿಸಬೇಕೆಂದು ಕಲ್ಮಡ್ಡಿ ಏತ ನೀರಾವರಿ ಹೋರಾಟ ಸಮಿತಿಯು ವಿನಮ್ರಪೂರ್ವಕವಾಗಿ ವಿನಂತಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಶನಿವಾರ ಎನ್.ಎಎಸ್.ಎಫ್. ಅತಿಥಿ ಗೃಹದಲ್ಲಿ ಹೋರಾಟ ಸಮಿತಿಯು ಶಾಸಕರನ್ನು ಅಭಿನಂದಿಸಿ ಬಂದಿದೆ ಎಂದು ಕೋಟಿನತೋಟ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಮಿತಿಯ ಸಂಘಟನಾ ಕಾರ್ಯದರ್ಶಿ ಡಿ.ಎಸ್. ನದಾಫ ಅವರು ಹೋರಾಟದ ಚಿತ್ರಣವನ್ನು ಬಿಡಿಸಿದರು. ಅರವಿಂದ ಸೊಗಲದ ಸುದ್ದಿ ಗೋಷ್ಠಿಯನ್ನು ಸ್ವಾಗತಿಸಿದರು, ಹೋರಾಟಗಾರರಾದ ಸಿದ್ದಪ್ಪ ಹುಂಡರದ, ಈರಪ್ಪಣ್ಣಾ ಬಿಸಗುಪ್ಪಿ, ಈರಪ್ಪ ಸಂಗಟಿ ಮುಂತಾದವರು ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts: