ಗೋಕಾಕ:ಮೋದಿ ಸರಕಾರದ ಐದು ವರ್ಷಗಳ ಆಡಳಿತ ವೈಪಲ್ಯಗಳನ್ನು ಜನರಿಗೆ ತಿಳಿಸಿ : ಸಚಿವ ಸತೀಶ
ಮೋದಿ ಸರಕಾರದ ಐದು ವರ್ಷಗಳ ಆಡಳಿತ ವೈಪಲ್ಯಗಳನ್ನು ಜನರಿಗೆ ತಿಳಿಸಿ : ಸಚಿವ ಸತೀಶ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 3 :
ಮೋದಿ ಸರಕಾರದ ಐದು ವರ್ಷಗಳ ಆಡಳಿತ ವೈಪಲ್ಯಗಳನ್ನು ಜನರ ಮನೆ ಮನೆಗೆ ತಿಳಿಸುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕೆಂದು ಅರಣ್ಯ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು, ಬುಧವಾರದಂದು ನಗರದ ಬಿರೇಶ್ವರ ಸಮುದಾಯ ಭವನದಲ್ಲಿ ಜರುಗಿದ ಗೋಕಾಕ ಹಾಗೂ ಅರಭಾಂವಿ ಬ್ಲಾಕ್ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜೆಡಿಎಸ್ ಕಾರ್ಯಕರ್ತರನ್ನು ಬೂತ್ ಮಟ್ಟದಲ್ಲಿ ಸಂಘಟಿಸಲು ಕಾರ್ಯಕರ್ತರು ಒಗ್ಗೂಡಬೇಕಿದೆ. ಮಾಜಿ ಸಿಎಂ ಸಿದ್ಧರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರಕಾರ ಹಾಗೂ ಮೈತ್ರಿ ಸರಕಾರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ಅರಭಾಂವಿ ಹಾಗೂ ಗೋಕಾಕ ವಿಧಾನ ಸಭಾ ಮತಕ್ಷೇತ್ರಗಳ ಪ್ರತ್ಯೇಕ ಸಭೆಯನ್ನು ಆಯೋಜಿಸಿ, ಕಾರ್ಯಕರ್ತರ ಕುಂದು ಕೊರತೆ ಬಗ್ಗೆ ಚರ್ಚೆ ಮಾಡಿ, ಮೈತ್ರಿ ಸರಕಾರದ ಅಭ್ಯರ್ಥಿ ಡಾ. ವ್ಹಿ ಎಸ್ ಸಾಧುನವರ ಅವರ ಪರಪ್ರಚಾರ ಕಾರ್ಯಕೈಗೊಳ್ಳುವ ರೂಪು ರೇಷೆಗಳ ಬಗ್ಗೆಯೂ ಸಹ ಚರ್ಚೆ ಮಾಡಿ ಕಾಂಗ್ರೇಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಲು ಶ್ರಮಿಸುವದಾಗಿ ತಿಳಿಸಿದರು.
ವೇದಿಕೆಯ ಮೇಲೆ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಸೋನವಾಲ್ಕರ, ಅರಭಾಂವಿ ಬ್ಲಾಕ್ ಅಧ್ಯಕ್ಷ ಚನ್ನಪ್ಪ ವಗ್ಗನ್ನವರ, ಗೋಕಾಕ ಜೆಡಿಎಸ್ ಮುಖಂಡ ಕೆ ಎಲ್ ತಳವಾರ, ಅರಭಾಂವಿ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ಗೋಡಿಗೌಡರ, ಮುಖಂಡ ಅಶ್ಫಾಕ್ ಮಡಕಿ, ಮಲ್ಲಿಕಾರ್ಜುನ ಅರಭಾಂವಿ ಸೇರಿದಂತೆ ಅರಭಾಂವಿ ಮತ್ತು ಗೋಕಾಕ ಬ್ಲಾಕ್ ಜೆಡಿಎಸ್ ಕಾರ್ಯಕರ್ತರು ಇದ್ದರು.