ಜವರಾಯಣ ಅಟ್ಟಹಾಸ, ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರ ಸಾವು..!
ನಮ್ಮ ಬೆಳಗಾವಿ ಸುದ್ದಿ , ರಾಮದುರ್ಗ ,ಏ.4-
ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಒಂದೇ ಕುಟುಂಬ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ರೇವಪ್ಪಾ ಕಲ್ಲೋಳಿ(35) ಪತ್ನಿ ರತ್ನಾ ಕಲ್ಲೋಳಿ (30) ಮಗ ¸ ಸಚಿನ್(8) ಮತ್ತು ಅಣ್ಣನ ಮಗ ಕೃಷ್ಣ (8) ಮೃತ ದುರ್ದೈವಿಗಳು. ನಿನ್ನೆ ಸಂಜೆ ಭಾರೀ ಮಳೆ ಸುರಿದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ನಾಲ್ವರು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ವಿದ್ಯುತ್ ತಂತಿ ತುಳಿದ ಪರಿಣಾಮ ಈ ಅವಘಡ ಸಂಭವಿಸಿದೆ.
ವಿದ್ಯುತ್ ತಂತಿ ತುಂಡಾಗಿ ಬಿದ್ದ ಮಾಹಿತಿಯನ್ನು ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ನೀಡಿದ್ದರು.
ವಿದ್ಯುತ್ ಕಂಬಗಳನ್ನು ಸರಿಪಡಿಸಲು ಮನವಿ ಮಾಡಿದ್ದರು. ಆದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದೇ ಈ ದುರ್ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೆÇಲೀಸ್ ಹಿರಿಯ ಅಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪರಿಣಾಮ ಕೆ.ತಿಮ್ಮಾಪುರದಲ್ಲಿ ಸೂತಕದ ಛಾಯೆ ಆವರಿಸಿತ್ತು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.