RNI NO. KARKAN/2006/27779|Thursday, November 7, 2024
You are here: Home » breaking news » ಕೌಜಲಗಿ : ಸಾರ್ವಜನಿಕ ಶೌಚಾಲಯಕ್ಕಾಗಿ ನಾಗರಿಕರಿಂದ ಪ್ರತಿಭಟನೆ

ಕೌಜಲಗಿ : ಸಾರ್ವಜನಿಕ ಶೌಚಾಲಯಕ್ಕಾಗಿ ನಾಗರಿಕರಿಂದ ಪ್ರತಿಭಟನೆ 

ಸಾರ್ವಜನಿಕ ಶೌಚಾಲಯಕ್ಕಾಗಿ ನಾಗರಿಕರಿಂದ ಪ್ರತಿಭಟನೆ

 

ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಮೇ 1 :

 
ಪಟ್ಟಣದಲ್ಲಿ ಬುಧವಾರದಂದು ನಾಗರಿಕರು ಸಾರ್ವಜನಿಕ ಶೌಚಾಲಯಕ್ಕಾಗಿ ಪ್ರತಿಭಟನೆ ನಡೆಸಿದರು.
ಕಳ್ಳಿಗುದ್ದಿ ರಸ್ತೆಯಲ್ಲಿ ರೈತ ಸಂಪರ್ಕ ಕೇಂದ್ರದ ಹತ್ತಿರ ಈಗಾಗಲೇ ಗ್ರಾಮ ಪಂಚಾಯತಿಯವರು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದರು. ಆದರೆ ಈಗ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಆ ಜಾಗೆಯನ್ನು ಕೆ.ಎಸ್.ಆರ್.ಟಿ.ಸಿ.ಗೆ ಹಸ್ತಾಂತರಿಸಲಾಗಿದ್ದು, ಕೇಂದ್ರ ಬಸ್ ನಿಲ್ದಾಣ ಕಟ್ಟಡ ಪ್ರಾರಂಭವಾಗಿದೆ. ಕಟ್ಟಡಕ್ಕೆ ಅಡಚಣೆಯಾದ ಶೌಚಾಲಯವನ್ನು ಕೆಡವಲಾಗಿದೆ. ಇದರಿಂದ ಮಹಿಳೆಯರಿಗೆ, ಮಕ್ಕಳಿಗೆ ಶೌಚಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದ್ದು, ತಕ್ಷಣವೇ ಗ್ರಾಮ ಪಂಚಾಯತದವರು ನಮಗೆ ಶೌಚಾಲಯವನ್ನು ನಿರ್ಮಿಸಿಕೊಡಬೇಕೆಂದು ಗ್ರಾಮದ ಸಾರ್ವಜನಿಕರು ಆಗ್ರಹಿಸಿದ್ದಾರೆ. ಒಂದು ವೇಳೆ ಬೇಗನೆ ಶೌಚಾಲಯ ನಿರ್ಮಿಸಿ ಕೊಡದಿದ್ದರೆ ಬಸ್ ನಿಲ್ದಾಣ ಕಟ್ಟಡವನ್ನು ನಿರ್ಮಿಸಲು ಅವಕಾಶ ಮಾಡಿಕೊಡುವದಿಲ್ಲವೆಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ನಾಗರಿಕರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ಇಂದು ಸಾರ್ವಜನಿಕ ರಜೆ ಇರುವುದರಿಂದ ನಿಲ್ದಾಣ ಕಟ್ಟಡ ಜಾಗದಲ್ಲಿಯೇ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಭರವಸೆ: ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದ ಕೌಜಲಗಿ ಮಾಜಿ ಜಿ.ಪಂ. ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷ ನೀಲಪ್ಪ ಕೇವಟಿಯವರು ಸಾರ್ವಜನಿಕರಿಗೆ ಸುವ್ಯವಸ್ಥಿತವಾದ ಶೌಚಾಲಯಗಳನ್ನು ಹಾಗೂ ರಕ್ಷಣಾ ಗೋಡೆಗಳನ್ನು ಗ್ರಾಮ ಪಂಚಾಯತಿ ವತಿಯಿಂದ ನಿರ್ಮಿಸಿ ಕೊಡಲಾಗುವದು, ಬಸ್ ನಿಲ್ದಾಣವು ಸಾರ್ವಜನಿಕರ ಸೇವೆಗಾಗಿಯೇ ಇರುವದರಿಂದ ಅದರ ಕಟ್ಟಡಕ್ಕೆ ಯಾವುದೇ ಅಡಚಣೆಯನ್ನು ಮಾಡಬಾರದೆಂದು ಪ್ರತಿಭಟನಾ ನಿರತರಲ್ಲಿ ಕೋರಿದ್ದಾರೆ.
ಪ್ರತಿಭಟನೆಯಲ್ಲಿ ಮಾಬುಬಿ ವಾಲಿಕಾರ, ಜೈಬೂಬಿ ಪರಾಸ, ಅಮೀನಾ ಸರ್ಕಾವಸ್, ಲಕ್ಷ್ಮೀ ಬಂಡಿವಡ್ಡರ, ಪಾರವ್ವಾ ಬಾಳಿಗಿಡದ, ಚನ್ನವ್ವ ಭೋವಿ, ಜಾನವ್ವಾ ಇಂಗಳ, ಅಂಜನಾ ದಳವಾಯಿ, ದಾದುಸಾಬ ಮುನ್ಯಾಳ, ಮಹಾಂತೇಶ ನಾಂವಿ, ಮಹಮ್ಮದ ಪರಾಸ, ಕಾಶೀಮ ಪೆಂಡಾರ, ಹುಸೇನ ಮುನ್ಯಾಳ, ರಾಜು ಹಳ್ಳೂರ, ಮೈಬು ಪರಾಸ, ಲಕ್ಷ್ಮಣ ಡಂಗರದಾರ ಮುಂತಾದವರು ಇದ್ದರು.

Related posts: