RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:ನೀರನ್ನು ಮಿತವಾಗಿ ಬಳಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಘಟಪ್ರಭಾ:ನೀರನ್ನು ಮಿತವಾಗಿ ಬಳಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ 

ನೀರನ್ನು ಮಿತವಾಗಿ ಬಳಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೇ 28 :

 
ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆ ಹಾಗೂ ಘಟಪ್ರಭಾ ನದಿಗೆ ಬಿಡಲಾಗಿರುವ ನೀರನ್ನು ಸಾರ್ವಜನಿಕರು ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಮಂಗಳವಾರ ಸಂಜೆ ಜಿಎಲ್‍ಬಿಸಿ ಕಾಲುವೆ ವ್ಯಾಪ್ತಿಯ ದುರದುಂಡಿ ಔಟಲೇಟ್-1 ಹಾಗೂ ರಾಜಾಪೂರ ಗ್ರಾಮಕ್ಕೆ ಭೇಟಿ ನೀಡಿ ಪ್ರಸಕ್ತ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದ ಅವರು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಾತ್ರ ಹಿಡಕಲ್ ಜಲಾಶಯದಿಂದ ನೀರು ಹರಿಸಲಾಗಿದೆ. ರೈತರು ಯಾವುದೇ ಕಾರಣಕ್ಕೂ ಕೃಷಿಗೆ ನೀರನ್ನು ಬಳಕೆ ಮಾಡಿಕೊಳ್ಳದಂತೆ ಇದೇ ಸಂದರ್ಭದಲ್ಲಿ ತಾಕೀತು ಮಾಡಿದ ಅವರು, ನೀರು ಅಮೂಲ್ಯವಾದದ್ದು. ನೀರನ್ನು ಮಿತವಾಗಿ ಬಳಕೆ ಮಾಡಿ. ಬಂಗಾರದಕ್ಕಿಂತಲೂ ನೀರಿಗೆ ಹೆಚ್ಚಿನ ಮೌಲ್ಯವಿದೆ ಎಂದು ಹೇಳಿದರು.
ದೇವರ ದಯೆಯಿಂದ ನಮ್ಮ ಭಾಗಕ್ಕೆ ಹೇಳಿಕೊಳ್ಳುವಂತಹ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಿಡಕಲ್ ಜಲಾಶಯದಿಂದ ನೀರು ಹರಿಸಲಾಗಿದೆ ಎಂದು ಹೇಳಿದರು.
ಜಿಆರ್‍ಬಿಸಿಗೆ ನೀರು ಹರಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೂ ನೀರು ಹರಿಸುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ 1 ಟಿಎಂಸಿ ನೀರನ್ನು 5 ದಿನಗಳವರೆಗೆ ಹರಿಸುವಂತೆ ಅವರು ಕೋರಿದ್ದಾರೆ.
ಸಂಗೊಳ್ಳಿ ರಾಯಣ್ಣಾ ಎಲ್ಲ ಸಮಾಜದ ಆಸ್ತಿ : ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣಾ ಅಪ್ರತಿಮ ಶೂರನಾಗಿದ್ದ. ಇಂತಹ ದೇಶಪ್ರೇಮಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬೇಡಿ. ರಾಯಣ್ಣಾ ಎಲ್ಲ ಸಮಾಜಗಳ ಸರ್ವಾಸ್ಥಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರಾಜಾಪೂರ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣಾ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಜಾಪೂರ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ರಾಯಣ್ಣಾ ಸ್ಮಾರಕ ಸಮೀತಿಯ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿದರು. ನಂತರ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು. ಹಂತ ಹಂತವಾಗಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಘ.ಯೋ.ಮ.ನೀ.ಸ.ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಗೋಕಾಕ ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬಸವಂತ ಕಮತಿ, ಹಿಡಕಲ್ ಡ್ಯಾಂ ಮಹಾಮಂಡಳ ನಿರ್ದೇಶಕ ಬಸವರಾಜ ಪಂಡ್ರೊಳ್ಳಿ, ಚೂನಮ್ಮದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಪಾಟೀಲ, ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಕಮತಿ, ಭೈರಪ್ಪ ಯಕ್ಕುಂಡಿ, ಭೀಮಪ್ಪ ಮಾಯನ್ನವರ, ಬಸು ಕಮನೂರೆ, ಗೋಪಾಲ ಪವಾರ, ಸಂಗಯ್ಯಾ ಹುನ್ನೂರ, ಸಂಜು ಬೈರುಗೋಳ, ಪ್ರಭಾಶುಗರ ಮಾಜಿ ನಿರ್ದೇಶಕ ರಾಮಣ್ಣಾ ಬಂಡಿ, ರಾಯಪ್ಪ ನಿಂಗನ್ನವರ, ರೇವಯ್ಯಾ ಮಠದ, ಭೀಮಶಿ ಅಂತರಗಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts: