ಗೋಕಾಕ:ಅಂಗನವಾಡಿ ಕಾರ್ಯಕರ್ತೆ (ಶಿಕ್ಷಕಿ) ಯಿಂದ ಪುಟ್ಟ ಮಗುವಿಗೆ ಬರೆ : ಗೋಕಾಕಿನಲ್ಲಿ ಘಟನೆ
ಅಂಗನವಾಡಿ ಕಾರ್ಯಕರ್ತೆ (ಶಿಕ್ಷಕಿ) ಯಿಂದ ಪುಟ್ಟ ಮಗುವಿಗೆ ಬರೆ : ಗೋಕಾಕಿನಲ್ಲಿ ಘಟನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 13 :
ನಗರದ ಅಂಗನವಾಡಿ ಕೇಂದ್ರವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ (ಶಿಕ್ಷಕಿ) ಯೋರ್ವರು ಪುಟ್ಟ ಮಗುವಿಗೆ ಬರೆ ಏಳೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ ದಿ.11ರಂದು ನಗರದ ಮಾಲದಾರ ಗಲ್ಲಿಯ ಅಂಗಣವಾಡಿ ಶಿಕ್ಷಕಿ ರೇಣುಕಾ ಅಂಬಿ ಎಂಬುವರು ಮಾಲದಾರ ಗಲ್ಲಿಯ ನಿವಾಸಿ ಶಬ್ಬೀರ ಶಭಾಶಖಾನ ಇವರ ಮಗು ಮಹ್ಮದಕಬ್ಬೀರ ಎಂಬ ಮೂರು ವರ್ಷ ಪ್ರಾಯದ ಮಗುವಿಗೆ ಊಟ ಬಡಿಸುವ ಸಾಧನ(ಚಮಚ)ವನ್ನು ಬೆಂಕಿಯಲ್ಲಿ ಕಾಯಿಸಿ ಕೈಗೆ ಬರೆ ಎಳಿದಿದ್ದಾರೆ.
ಮಗುವನ್ನು ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ನಂತರ ಮನೆಗೆ ಕರೆದೊಯ್ಯಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಕುರಿತು ಅಂಗನವಾಡಿ ಶಿಕ್ಷಕಿಯ ಮೇಲೆ ಘಟನೆ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಯ ಉದ್ಧಟತನದ ಮಾತು:
ನಗರದ ಅಂಗನವಾಡಿ ಕೇಂದ್ರವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯೋರ್ವರು ಪುಟ್ಟ ಮಗುವಿಗೆ ಬರೆ ಏಳೆದಿರುವ ಘಟನೆ ಕುರಿತು ಹೆಚ್ಚಿನ ಮಾಹಿತಿ ಕೇಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅನೀಲ ಕಾಂಬಳೆ ಅವರನ್ನು ಪತ್ರಕರ್ತರು ದೂರವಾಣಿ ಮುಖಾಂತರ ಗುರುವಾರ ಸಂಜೆ ಸಂಪರ್ಕಿಸಿದರೆ ನಿಮಗೆ ನಾವು ರಾತ್ರಿ ಸಮಯದಲ್ಲಿ ನೆನಪಿಗೆ ಬರುತ್ತಿವಾ ಎಂದು ಉದ್ಧಟತನ ಮಾತಗಳನ್ನಾಡಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಈ ರೀತಿಯ ಶಿಕ್ಷೆ ನೀಡಿದರೆ ಮಕ್ಕಳನ್ನು ಹೇಗೆ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವದು ಎಂದು ಜನರು ಭಯದಿಂದ ಅಂಗನವಾಡಿಯತ್ತ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.