RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ಘನತ್ಯಾಜ್ಯ ವಸ್ತು ನಿಯಮಗಳು ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ಸಹಕರಿಸಿ : ವಿ.ಎಸ್.ತಡಸಲೂರ

ಗೋಕಾಕ:ಘನತ್ಯಾಜ್ಯ ವಸ್ತು ನಿಯಮಗಳು ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ಸಹಕರಿಸಿ : ವಿ.ಎಸ್.ತಡಸಲೂರ 

ಘನತ್ಯಾಜ್ಯ ವಸ್ತು ನಿಯಮಗಳು ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ಸಹಕರಿಸಿ : ವಿ.ಎಸ್.ತಡಸಲೂರ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 26 :

 

 
ರಾಷ್ಟ್ರೀಯ ಹಸಿರು ನ್ಯಾಯ ಪೀಠದ ಆದೇಶದ ಮೇರೆಗೆ ಘನತ್ಯಾಜ್ಯ ವಸ್ತು ನಿಯಮಗಳು 2016ರನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಗೋಕಾಕ ನಗರ ವ್ಯಾಪ್ತಿಯ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕಾರ ನೀಡುವಂತೆ ಪೌರಾಯುಕ್ತ ವಿ.ಎಸ್.ತಡಸಲೂರ ವಿನಂತಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕಸವನ್ನು ಸಾರ್ವಜನಿಕ ರಸ್ತೆಯಲ್ಲಿ, ಬಯಲು ಪ್ರದೇಶಗಳಲ್ಲಿ ಅಥವಾ ಚರಂಡಿ, ನೀರಿನ ಮೂಲಗಳಲ್ಲಿ ಹಾಕುವದಾಗಲಿ, ಹೂಳುವದಾಗಲಿ ಮತ್ತು ಸುಡುವುದನ್ನು ನಿಷೇಧಿಸಲಾಗಿದೆ. ನಾಗರಿಕರು ತಮ್ಮ ಮನೆ, ಅಂಗಡಿ ಅಥವಾ ಔದ್ಯೋಗಿಕ ಘಟಕದಲ್ಲಿ ಉತ್ಪಾದನೆಯಾಗುವ ಕಸದಲ್ಲಿ ಹಸಿ ಕಸ ಮತ್ತು ಒಣ ಕಸ ಹಾಗೂ ಹಾನಿಕಾರಕ ಗೃಹೋಪಯೋಗಿ ತ್ಯಾಜ್ಯ ಮೂರು ಪ್ರತ್ಯೇಕ ಡಬ್ಬಿಗಳಲ್ಲಿ ಸಂಗ್ರಹಿಸಿ ನಗರಸಭೆಯ ವಾಹನಕ್ಕೆ ನೀಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ
ನಾಗರಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ತಮ್ಮ ಆವರಣದಲ್ಲಿ ಸೂಕ್ತ ಜಾಗ ಇದ್ದಲ್ಲಿ ಎರೆಹುಳು ವಿಧಾನ, ಪೈಪ ಕಾಂಪೋಸ್ಟಿಂಗ್, ಬಯೋಬಿನ್ ಅಥವಾ ಇನ್ನಿತರ ಸೂಕ್ತ ವಿಧಾನ ಬಳಸಿ ವಿಲೇವಾರಿ ಮಾಡಬೇಕು.ನಗರಸಭೆಯಿಂದ ನಿಗದಿಪಡಿಸಿದ ಘನತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕವನ್ನು ಪ್ರತಿ ವರ್ಷ ಸ್ವಯಂಘೋಷಿತ ಆಸ್ತಿ ತೆರಿಗೆಯೊಂದಿಗೆ ಭರಣಾ ಮಾಡಬೇಕು. ಕನಿಷ್ಠ 100 ಜನ ಸೇರುವ ಸಭೆ, ಸಮಾರಂಭ ಮತ್ತು ಯಾವುದೇ ಕಾರ್ಯಕ್ರಮಗಳನ್ನು ಮೂರು ದಿವಸ ಮುಂಚಿತವಾಗಿ ನಗರಸಭೆಯಿಂದ ಪರವಾಣಿಗೆ ಪಡೆಯುವುದು ಕಡ್ಡಾಯವಾಗಿದೆ. ಬೀದಿ ವ್ಯಾಪಾರಸ್ಥರು ಕಸವನ್ನು ಸಂಗ್ರಹಿಸಲು ಪ್ರತ್ಯೇಕ ಡಬ್ಬಿಗಳನ್ನು ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.
5000 ಚ.ಮೀ. ಕ್ಕಿಂತ ಹೆಚ್ಚು ಅಳತೆಯ ಆವರಣವಿರುವ ಸಮುದಾಯ ಸಮುಚ್ಚಯಗಳು ಹಾಗೂ ಅಪಾರ್ಟಮೆಂಟಗಳು, ಎಲ್ಲ ಹೊಟೇಲ ಮತ್ತು ರೆಸ್ಟಾರೆಂಟಗಳು ಸಂಸ್ಥೆಗಳು ತಮ್ಮ ಆವರಣದಲ್ಲಿ ಹಸಿ ಕಸವನ್ನು ಸೂಕ್ತ ಗೊಬ್ಬರ ತಯಾರಿಸುವ ವಿಧಾನ ಬಳಸಿ ಸಂಸ್ಕರಿಸುವುದು. ಮರು ಬಳಕೆಯಾಗುವಂತಹ ಕಸವನ್ನು ವೇಸ್ಟ ಡೀಲರ್‍ಗಳ ಮುಖಾಂತರ ವಿಲೇವಾರಿ ಮಾಡುವುದು. ತಮ್ಮ ಆವರಣದಲ್ಲಿ ಉತ್ಪಾದಿಸಿದ ಕಸದಲ್ಲಿ ಹಸಿ ಕಸವನ್ನು ಸೂಕ್ತ ಗೊಬ್ಬರ ತಯಾರಿಸುವ ವಿಧಾನ ಬಳಸಿ ಸಂಸ್ಕರಿಸುವುದು. ಎಲ್ಲ ವಿಧಧ ಪ್ಲಾಸ್ಟಿಕ್ ಕ್ಯಾರಿಬ್ಯಾಗಗಳನ್ನು ನಿಷೇಧಿಸಿದ್ದರಿಂದ ಹೊಟೇಲ್, ಬೇಕರಿ, ಹೊಲ್‍ಸೇಲ್ ಮತ್ತು ರಿಟೇಲ್ ಅಂಗಡಿಕಾರರು ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗಗಳನ್ನು ನೀಡುವುದು ಕಂಡು ಬಂದಲ್ಲಿ ನಿಷೇಧಿತ ಪ್ಲಾಸ್ಟಿಕ್‍ನ್ನು ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಹಾಗೂ ರಾಸಾಯನಿಕ ಬಣ್ಣ ಬಳಿದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ನೈಸರ್ಗಿಕ ಬಣ್ಣದಿಂದ ಮತ್ತು ಜೇಡಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಲು ಸಾರ್ವಜನಿಕರಿಗೆ ವಿನಂತಿಸಲಾಗಿದೆ.ಈ ಎಲ್ಲ ನಿಯಮಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು. ಇಲ್ಲದಿದ್ದರೆ ಅಂಥವರ ಮೇಲೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ನಗರಸಭೆ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: