ಗೋಕಾಕ:ಮೋದಿ ನಾಯಕತ್ವದಲ್ಲಿ ಭಾರತ ದೇಶ ಜಗತ್ತಿನಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿದ : ಮಾಜಿ ಸಚಿವ ಬಾಲಚಂದ್ರ
ಮೋದಿ ನಾಯಕತ್ವದಲ್ಲಿ ಭಾರತ ದೇಶ ಜಗತ್ತಿನಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿದ : ಮಾಜಿ ಸಚಿವ ಬಾಲಚಂದ್ರ
ಗೋಕಾಕ ಜು 13: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ನಾಯಕತ್ವದಿಂದ ಭಾರತ ದೇಶ ಜಗತ್ತಿನಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದಕ್ಕೆ ಪ್ರಧಾನಿಯವರು ದೇಶದ ಜನತೆಗೆ ಅರ್ಪಿಸಿರುವ ಯೋಜನೆಗಳೇ ಸಾಕ್ಷಿಯಾಗಿವೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗುರುವಾರದಂದು ಜರುಗಿದ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಅರಭಾವಿ ಕ್ಷೇತ್ರದ ಫಲಾನುಭವಿಗಳಿಗೆ ಎಲ್‍ಪಿಜಿ ಗ್ಯಾಸ್ ವಿತರಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ದೇಶದ 5 ಕೋಟಿ ಮಹಿಳೆಯರಿಗೆ ಎಲ್‍ಪಿಜಿ ಸಂಪರ್ಕ ನೀಡಿದ್ದಾರೆ. ಅರಭಾವಿ ಕ್ಷೇತ್ರದ ಸುಮಾರು ಮೂರುವರೆ ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆದಿದ್ದು, ಮುಂದಿನ ದಿನಗಳಲ್ಲಿ ಸುಮಾರು 15 ಸಾವಿರ ಬಿಪಿಎಲ್ ಕುಟುಂಬಗಳಿಗೆ ಉಜ್ವಲಾ ಯೋಜನೆಯ ಲಾಭ ದೊರಕಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸಾಕಷ್ಟು ಯೋಜನೆಗಳನ್ನು ಅರ್ಪಿಸಿದ್ದಾರೆ. ಪ್ರಧಾನಮಂತ್ರಿ ಜನಧನ ಯೋಜನೆ, ಪ್ರಧಾನ ಮಂತ್ರಿ ಆವಾಸ ಯೋಜನೆ, ಯುವಭಾರತ್ ಶ್ರೇಷ್ಠ ಭಾರತ್, ಪ್ರತಿ ಹೆಣ್ಣು ಮಗುವಿನ ಸುರಕ್ಷತೆಗಾಗಿ ಬೇಟಿ ಬಚಾವೋ ಬೇಟಿ ಪಡಾವೋ, ದೀನದಯಾಳ ಅಂತ್ಯೋದಯ ಯೋಜನೆಯಡಿ 10 ಲಕ್ಷ ಸ್ವ-ಸಹಾಯ ಗುಂಪುಗಳ ರಚನೆ, 1.20 ಕೋಟಿ ಕುಟುಂಬಗಳಿಗೆ 69 ಸಾವಿರ ಕೋಟಿ ಸಾಲ ಸೌಲಭ್ಯ, ಅನ್ನದಾತ ರೈತನಿಗೆ ಪ್ರಧಾನಮಂತ್ರಿ ಫಸಲ್‍ವಿಮಾ ಯೋಜನೆ ಸ್ವಚ್ಛ ಭಾರತ, ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಸೇರಿದಂತೆ ನೂರಾರು ಜನಪರ ಯೋಜನೆಗಳನ್ನು ಅರ್ಪಿಸಿದ ಕೀರ್ತಿ ಪ್ರಧಾನಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ರಾಜು ಮಗಿಮಠ, ಜಿಪಂ ಸದಸ್ಯರಾದ ಗೋವಿಂದ ಕೊಪ್ಪದ, ವಾಸಂತಿ ತೇರದಾಳ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ತಾಪಂ ಸದಸ್ಯರಾದ ಲಕ್ಷ್ಮಣ ನೀಲನ್ನವರ, ಶಾಂತಪ್ಪ ಹಿರೇಮೇತ್ರಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಅಶೋಕ ಪರುಶೆಟ್ಟಿ, ಬಸವಂತ ಕಮತಿ, ಮುತ್ತೆಪ್ಪ ಕುಳ್ಳೂರ, ಜಿಪಂ ಮಾಜಿ ಸದಸ್ಯರಾದ ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಪರಮೇಶ್ವರ ಹೊಸಮನಿ, ಮುಖಂಡರಾದ ಗಿರೀಶ ನಾಡಗೌಡ, ಗಿರೀಶ ಹಳ್ಳೂರ, ಮುಂತಾದವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗಣ್ಯ ವರ್ತಕ ಹಾಗೂ ಆರ್‍ಎಸ್‍ಎಸ್ ಹಿರಿಯ ಮುಖಂಡ ಎಂ.ಡಿ. ಚುನಮರಿ ಅವರು, ಗೋಕಾಕ ತಾಲೂಕಿಗೆ ಉಜ್ವಲಾ ಯೋಜನೆಯಡಿ 31 ಸಾವಿರ ಕುಟುಂಬಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಬಾಲಚಂದ್ರ ಅವರಂತಹ ಹೃದಯವಂತ ಶಾಸಕರನ್ನು ಪಡೆದಿರುವ ನೀವೆಲ್ಲ ಪುಣ್ಯವಂತರು ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 3500 ಬಿಪಿಎಲ್ ಫಲಾನುಭವಿಗಳಿಗೆ ಉಜ್ವಲಾ ಯೋಜನೆಯಡಿ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಿಸಿದರು.
ಗೋಕಾಕ ಮಲ್ಲಿಕಾರ್ಜುನ ಎಚ್‍ಪಿ ಎಜೆನ್ಸಿಸ್, ಪವನ ಇಂಡೇನ್ ಗ್ಯಾಸ್, ಶಿವಂ ಗ್ಯಾಸ್ ವಿತರಕರು, ಘಟಪ್ರಭಾದ ಮನೀಶ್ ಗ್ಯಾಸ್ ಎಜೆನ್ಸಿಸ್, ದಿವಾಕರಲಾ ಎಜೆನ್ಸಿಸ್, ಕೊಣ್ಣೂರಿನ ರೇಣುಕಾ ಗ್ಯಾಸ್ ಎಜೆನ್ಸಿಸ್, ಶಿವಪ್ರಸಾದ ಗ್ಯಾಸ್ ಎಜೆನ್ಸಿಸ್, ಕಲ್ಲೋಳಿಯ ಪಾಟೀಲ ಗ್ರಾಮೀಣ ವಿತರಕ, ಕೌಜಲಗಿಯ ಗಂಗಾಮಾತಾ ಗ್ರಾಮೀಣ ಐಓಸಿ ವಿತರಕ, ಲಕ್ಷ್ಮೇಶ್ವರ ರೇವಣಸಿದ್ಧೇಶ್ವರ ಗ್ರಾಮೀಣ ವಿತರಣಾ ಕೇಂದ್ರಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜರುಗಿತು.
ಬಾಲಚಂದ್ರ ಜಾರಕಿಹೊಳಿ ಶಾಸಕರು, ಅರಭಾವಿ:
ಮಳೆರಾಯನ ಅವಕೃಪೆಯಿಂದ ಬರಗಾಲಕ್ಕೆ ನಾವೆಲ್ಲ ತುತ್ತಾಗಿದ್ದೇವೆ. ನಿಗಧಿತ ಪ್ರಮಾಣದಲ್ಲಿ ಮಳೆ ಆಗದೇ ಇರುವದರಿಂದ ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಕುಡಿಯುವ ನೀರಿಗಾಗಿ ಮಾತ್ರ ಘಟಪ್ರಭಾ ಬಲದಂಡೆ ಕಾಲುವೆಗೆ 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ. ಈ ನೀರನ್ನು ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡಿ.