RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಉತ್ತರ ಹಾಗೂ ದಕ್ಷಿಣ ಎಂಬ ಬೇಧ-ಭಾವ ಮರೆತು ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸೋಣ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಉತ್ತರ ಹಾಗೂ ದಕ್ಷಿಣ ಎಂಬ ಬೇಧ-ಭಾವ ಮರೆತು ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸೋಣ : ಶಾಸಕ ಬಾಲಚಂದ್ರ ಜಾರಕಿಹೊಳಿ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತರ ಹಾಗೂ ದಕ್ಷಿಣ ಎಂಬ ಬೇಧ-ಭಾವ ಮರೆತು ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸೋಣ : ಶಾಸಕ ಬಾಲಚಂದ್ರ ಜಾರಕಿಹೊಳಿ

 

 

ಗೋಕಾಕದಲ್ಲಿ ಬೆಳಗಾವಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 28 :

 
ಸಾಹಿತಿಗಳ ಬರವಣಿಗೆಯಲ್ಲಿ ಅಪಾರ ಶಕ್ತಿ ಇದ್ದು, ಗಡಿನಾಡಲ್ಲಿ ಸೋರುತ್ತಿರುವ ಕನ್ನಡ ಶಾಲೆಗಳ ಸೂರುಗಳನ್ನು ಗಟ್ಟಿಗೊಳಿಸಬೇಕಾಗಿದೆ. ಅಂತೆಯೇ ಸುವರ್ಣ ಸೌಧದಲ್ಲಿ ಆಡಳಿತಕ್ಕೆ ಸರ್ಕಾರಿ ಕಛೇರಿಗಳನ್ನು ಸ್ಥಳಾಂತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಸರ್ಕಾರದ ಮೇಲೆ ಬರವಣಿಗೆ ಮೂಲಕ ಪ್ರಭಾವ ಬೀರಬೇಕು. ಅದಕ್ಕೆ ಪೂರಕವಾಗಿ ಈ ಭಾಗದ ನಾವೆಲ್ಲ ರಾಜಕಾರಣಿಗಳು ಕಾರ್ಯನಿರ್ವಹಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಕೆಎಲ್‍ಇ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಇಂದಿನಿಂದ ಎರಡು ದಿನಗಳವರೆಗೆ ನಡೆಯಲಿರುವ ಬೆಳಗಾವಿ ಜಿಲ್ಲಾ 13ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರ ಅಭಿಪ್ರಾಯಕ್ಕೆ ಪೂರಕವಾಗಿ ಧ್ವನಿಗೂಡಿಸಿದ ಅವರು, ಉತ್ತರ ಹಾಗೂ ದಕ್ಷಿಣ ಎಂಬ ಬೇಧ-ಭಾವ ಮರೆತು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಕನ್ನಡ ಶಾಲೆಯ ಸೂರುಗಳು ಸೋರುತ್ತಿವೆ. ಇದರಿಂದ ಮಕ್ಕಳ ಪ್ರಾಣಾಪಾಯದ ಬಗ್ಗೆ ಪಾಲಕರಿಗೆ ಆತಂಕವಾಗುತ್ತಿದೆ. ಈ ಹಿಂದೆ ಯಮಕನಮರಡಿ ಕ್ಷೇತ್ರದ ಶಾಲೆಯೊಂದು ಮಳೆಯಿಂದಾಗಿ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದರು ಎಂಬುದನ್ನು ಸ್ಮರಿಸಿಕೊಂಡ ಅವರು, ಆದ್ದರಿಂದ ಕನ್ನಡ ಶಾಲೆಗಳ ದುರಸ್ತಿಗಾಗಿ ಪಟ್ಟಿಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡುವಂತೆ ಸರ್ವಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.
ಕನ್ನಡ ನೆಲ-ಜಲ-ಭಾಷೆಯ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ಕನ್ನಡ ಭಾಷೆಗೆ ಅನ್ಯಾಯವಾದಾಗ ಅದನ್ನು ಹೋರಾಟದ ಮೂಲಕ ಪ್ರತಿಭಟಿಸುವ ಶಕ್ತಿ ನಮಗೆ ಬರುವಂತಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಒತ್ತಿ ಹೇಳಿದರು.
ಕಾವೇರಿ ಜಲವಿವಾದ ವಿಷಯ ಬಂದಾಗ ಇಡೀ ರಾಜ್ಯದ ಜನರು ಯಾವುದೇ ಉತ್ತರ-ದಕ್ಷಿಣ ಎಂಬ ಬೇಧ-ಭಾವವಿಲ್ಲದೇ ಹೋರಾಟಕ್ಕೆ ಇಳಿಯುತ್ತೇವೆ. ಅದರಂತೆ ನಮಗೆ ಅನ್ಯಾಯವಾದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಈ ಮೂಲಕ ಒಗ್ಗಟ್ಟಿನ ಮಂತ್ರವನ್ನು ನಾವೆಲ್ಲ ಜಪಿಸಬೇಕಾಗಿದೆ ಎಂದು ಹೇಳಿದರು.

ಹೊಂದಾಣಿಕೆ ಕೊರತೆಯಿಂದ ಅನುದಾನ ರದ್ದು :

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೊಂದಾಣಿಕೆ ಕೊರತೆಯಿಂದಾಗಿ ರಾಜ್ಯದಲ್ಲಿನ ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಆರ್‍ಎಂಎಸ್‍ಎ ಯೋಜನೆಯ 433 ಕೋಟಿ ರೂ. ಅನುದಾನ ರದ್ದಾಯಿತು. ಇದರಲ್ಲಿ ಬೆಳಗಾವಿ ಜಿಲ್ಲೆಯೊಂದಕ್ಕೆ ಸುಮಾರು 72 ಕೋಟಿ ರೂ.ಗಳ ಕಾಮಗಾರಿ ನಿಂತು ಹೋಯಿತು. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಘರ್ಷದಿಂದಾಗಿ ಮಂಜೂರಾಗಿದ್ದ ಅನುದಾನ ರದ್ದಾಗಲಿಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು.
ಬೆಳಗಾವಿಯಲ್ಲಿರುವ ಸುವರ್ಣ ಸೌಧದಲ್ಲಿ ಸರ್ಕಾರದ ಕೆಲ ಕಛೇರಿಗಳ ಸ್ಥಳಾಂತರಕ್ಕೆ ಸಾಧ್ಯವಿದ್ದಷ್ಟು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದರಿಂದ ಜನಸಾಮಾನ್ಯರು ದೂರದ ರಾಜಧಾನಿಗೆ ಹೋಗುವುದು ತಪ್ಪಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಿಡಸೋಶಿ ದುರದುಂಡೇಶ್ವರ ಮಠದ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮತ್ತು ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ವಹಿಸಿದ್ದರು.
ನಿಕಟಪೂರ್ವ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೋ. ಜ್ಯೋತಿ ಹೊಸೂರ, ನೀಲಗಂಗಾ ಚರಂತಿಮಠ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಜ್ಯೋತಿ ಬದಾಮಿ, ಮಾಜಿ ನಗರಾಧ್ಯಕ್ಷರಾದ ಶಿದ್ಲಿಂಗ ದಳವಾಯಿ, ಎಸ್.ಎ. ಕೋತವಾಲ, ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಮುಖಂಡ ಅಶೋಕ ಪೂಜೇರಿ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಶ್ಯಾಮಾನಂದ ಪೂಜೇರಿ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಮುರಳೀಧರ ತಳ್ಳಿಕೇರಿ, ತಾಪಂ ಇಓ ಬಸವರಾಜ ಹೆಗ್ಗನಾಯ್ಕ, ಪೌರಾಯುಕ್ತ ವಿಠ್ಠಲ ತಡಸಲೂರ, ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಕಸಾಪ ಅಧ್ಯಕ್ಷರುಗಳು, ಕನ್ನಡಪರ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು. ಚಿಂತಕ ಡಾ.ಗುರುರಾಜ ಕರಜಗಿ ಅವರು ವಿಶೇಷ ಉಪನ್ಯಾಸ ನೀಡಿದರು.
ಆರಂಭದಲ್ಲಿ ವಿದ್ಯಾ ಮಗುದಮ್ಮ ಪ್ರಾರ್ಥಿಸಿದರು. ಕಸಾಪ ತಾಲೂಕಾ ಅಧ್ಯಕ್ಷ ಮಹಾಂತೇಶ ತಾಂವಶಿ ಸ್ವಾಗತಿಸಿದರು. ಪ್ರೋ. ಚಂದ್ರಶೇಖರ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ಕಾಕಡೆ ಮತ್ತು ಶೈಲಾ ಕೊಕ್ಕರಿ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು. ಸಿದ್ರಾಮ ದ್ಯಾಗಾನಟ್ಟಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಬಸವೇಶ್ವರ ವೃತ್ತದಿಂದ ಸಮ್ಮೇಳನದ ಸಭಾ ಮಂಟಪದವರೆಗೆ ಸಕಲ ವಾದ್ಯ-ವೃಂದದೊಂದಿಗೆ ಆಕರ್ಷಕವಾಗಿ ಜರುಗಿತು. ಕನ್ನಡ ರೂಪಕಗಳು ಕನ್ನಡಾಭಿಮಾನಿಗಳ ಗಮನ ಸೆಳೆದವು.

Related posts: