ಗೋಕಾಕ: ಗೋಕಾವಿ ನಾಡು ಕಲಾವಿದರ ತವರೂರು : ಸಮ್ಮೇಳನ ಸರ್ವಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಅಭಿಮತ
ಗೋಕಾವಿ ನಾಡು ಕಲಾವಿದರ ತವರೂರು : ಸಮ್ಮೇಳನ ಸರ್ವಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಅಭಿಮತ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 28 :
ಗೋಕಾಕ ನಾಡು ಕಲಾವಿದರ ತವರೂರು , ಕಲೆ ಕೌಶಲ್ಯಗಳನ್ನು ಕರತಲಾಮಲಕ ಮಾಡಿಕೊಂಡಿರುವ ಅಪೂರ್ವ ಕಲಾವಿದರ ಬೃಹತ್ ತಂಡವೇ ಗೋಕಾವಿ ನಾಡಿನಲ್ಲಿರುವದು ಅಭಿಮಾನಕ್ಕೆ ಕೋಡು ಮೂಡಿಸಿದೆ ಎಂದು ಬೆಳಗಾವಿ ಜಿಲ್ಲಾ 13 ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು
ನಗರದ ಕೆಎಲ್‍ಇ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಇಂದಿನಿಂದ ಎರಡು ದಿನಗಳವರೆಗೆ ನಡೆಯಲಿರುವ ಬೆಳಗಾವಿ ಜಿಲ್ಲಾ 13ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆತೆಯನ್ನು ವಹಿಸಿ ಅವರು ಮಾತನಾಡಿದರು.
ಜಗದ್ವಿಖ್ಯಾತ ಚಿತ್ರಕಲಾವಿದರಾದ ದಾನಪ್ಪ ಹಾಲಭಾವಿ , ಭೀಮರಾವ್ ಮುರಗೋಡ , ಗುಂಡೋಪಂತ ಪತ್ತಾರ , ಸಂಗೀತ ಕಲಾವಿದ ಈಶ್ವರ ಮಿಣಚಿ ,ಜಾನಪದ ರಂಗಪರಂಪರೆಯ ನಿಂಗಯ್ಯ ಸ್ವಾಮಿ ಪೂಜಾರಿ , ಪಾರಿಜಾತ ಕಲಾವಿದ ಕೆಮ್ಮನಕೋಲ ಯಲ್ಲಪ್ಪ , ಬಾಳಿಕಾಯಿ ರಾಮಪ್ಪ ,ಶ್ರೀಶೈಲ ಬಹುರೂಪಿ ,ಶಿವಗುರಿ ಬಾನಿ , ಪರಸಪ್ಪ ಕಡಕೋಳ ,ಹೂಲಿಕಟ್ಟಿ ಮಹಾದೇವ , ಭಗಪ್ಪ ಕದಂ , ಮಾರುತಿ ತಟ್ಟೀಮನಿ , ಬಿ.ಪಿ.ಕಬಾಡಗಿ , ಕವಿ ಬಾಳಗೋಪಾಲ , ಮಲ್ಲೇಶ ಪತ್ತಾರ ,ಗಿರಣಿ ಮಲ್ಲಪ್ಪ , ಲಾವಣಿಕಾರ ಸಾತು ಕ್ಯಾಮಣ್ಣ , ಶಾಹಿರ ಶಿಖಾಮಣಿ , ಅಲಿಸಾಬ ನದಾಫ , ಬಯಲಾಟ ಕಲಾವಿದ ಅಡಿಬಟ್ಟಿ ಮಲ್ಲಪ್ಪ ಪಾಟೀಲ , ಕಲ್ಪವೃಕ್ಷ ನಾಟಕ ಕಂಪನಿ ಮಾಲಿಕ ಬನಪ್ಪಾ ಹುನೂರ ಮುಂತಾದ ಕಲಾಶ್ರೇಷ್ಠರು ಗೋಕಾವಿ ನಾಡಿನ ಸಾಂಸ್ಕೃತಿಕ ಜೀವ ನಾಡಿಯಾಗಿದ್ದಾರೆ .
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾರ್ಥಕ ಕೃಷಿಗೈದ ಸಾಹಿತಿಗಳ ಸಾಗರವೇ ಗೋಕಾವಿ ನಾಡಿನಲ್ಲಿದೆ . ಡಾ.ನಿಂಗಣ್ಣ ಸಣ್ಣಕ್ಕಿ , ನಾಟಕಕಾರ ಸುಣಧೋಳಿಯ ಸಿದ್ದಗಿರಿಯಪ್ಪ , ಕಲ್ಲೋಳಿಯ ರಾವಜಿ , ಬಾಲಕೃಷ್ಣ ಕುಲಕರ್ಣಿ ,ಡಾ.ಸಿ.ಕೆ ನಾವಲಗಿ , ಮಹಾಲಿಂಗ ಮಂಗಿ , ಶ್ರೀರಾಮ ಇಟ್ಟಣ್ಣವರ , ಪ್ರೊ.ರಾಘವೇಂದ್ರ ಪಾಟೀಲ . ಪತ್ರಿಕಾಕರ್ತರೂ ಬರಹಗಾರರಾದ ಜಿ.ಕೆ ಬಡಿಗೇರ , ಲಕ್ಷಣ ಶೆರೆಗಾರ , ಡಾ.ಪಿ.ಎಸ್.ಹೊಸೂರ , ಶಿವಯೋಗಿ ಬಿದರಿ , ಆರ್.ಡಿ.ಮಜಲಿಕರ , ಧಿಮಂತ ಪತ್ರಕರ್ತ ಬಿ.ಎನ್.ಧಾರವಾಡಕರ , ಲಕ್ಷಣ ಪಟಾತ ಮುಂತಾದವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಕೃಷಿ ಮಾಡಿದ್ದುಂಟು . ಗೋಕಾವಿ ನಾಡಿನಲ್ಲಿ ಕನ್ನಡದ ವಾತಾವರಣವನ್ನು ಜೀವಂತವಾಗಿಟ್ಟ ಸಾಹಿತ್ಯಿಕ , ಸಾಂಸ್ಕೃತಿಕ , ಹೋರಾಟಗಳ ಸಂಘಟನೆಗಳ ಸೇವೆಯು ಅನ್ಯಣವಾಗಿದೆ .
ಜಗತ್ತಿನ 20 ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದು ಭಾಷಾತಜ್ಞರ ನಿರ್ಣಯ . ಸಾವಿರಾರು ವರ್ಷಗಳ ಶ್ರೀಮಂತ ಪರಂಪರೆ ಹೊಂದಿದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ . ಕನ್ನಡದಲ್ಲಿ ಉತ್ಕೃಷ್ಟ ರಚನೆಯಾಗಿದೆ . ಆದರೆ ಜಾಗತೀಕರಣದ ಈ ಸಂದರ್ಭದಲ್ಲಿ ಅನ್ನದ ಭಾಷೆಯಾಗಿ ರೂಪಗೊಂಡಿರುವ ಜಾಗತಿಕ ಭಾಷೆಯೆಂದು ಕರೆಸಿಕೊಳ್ಳುವ ಇಂಗ್ಲಿಷ್ ವ್ಯಾಪಕ ಕಲಿಕೆ ಮತ್ತು ಬಳಕೆಯ ಪರಿಣಾಮದಿಂದಾಗಿ ಭಾರತದ ಅನೇಕ ಪ್ರಾದೇಶಿಕ ಭಾಷೆಗಳು ತಮ್ಮ ಬೇರುಗಳನ್ನು ಜೀವಂತವಾಗಿಸಿಕೊಳ್ಳಲು ಹೋರಾಡಬೇಕಾಗಿದೆ . ಉದ್ಯೋಗಜ ದಾಹವನ್ನು ತಣಿಸುವ ಮೂಲಕ ಇಂಗ್ಲಿಷ್ ಭಾಷೆಯು ಇತರ ಭಾಷಿಕರ ಬದುಕನ್ನೇ ಕಸಿದುಕೊಂಡಿದೆ . ಜಾಗತಿಕ ಮಾರುಕಟ್ಟೆಯ ಭಾಷೆಯಾದ ಇಂಗ್ಲಿಷ್ ನಮಗೆ ಬೇಡವೆಂದಲ್ಲ , ಅದು ಎಷ್ಟು ಬೇಕೆಂಬುದನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕಾಗಿದೆ . ಮಾತೃ ಭಾಷೆಯಲ್ಲಿ ಮಾತಾನಾಡುವ ಬರೆಯುವ ಸಾಮರ್ಥ್ಯವನ್ನು ಅಳವಡಿಸಿಕೊಳ್ಳುವ ಮಗು , ಹೆಚ್ಚಿನ ಜ್ಞಾನ ,ವಿಜ್ಞಾನ , ತಂತ್ರಜ್ಞಾನ ,ತತ್ವಜ್ಞಾನವನ್ನು ಅರ್ಥೇಸಿಕೊಂಡು ತನ್ನದಾಗಿಸಿಕೊಳ್ಳುತ್ತದೆ . ಶೃಜನಾತ್ಮಕ ಶಕ್ತಿಯನ್ನು ಪಡೆಯುತ್ತದೆ ಎಂದು ಸಾರ್ವಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು .
ಸರ್ವಾಧ್ಯಕ್ಷರ ಭಾಷಣಕ್ಕೆ ಮಳೆರಾಯನ ಅಡ್ಡಿ :
ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಭಾಷಣ ಮಾಡುವ ಸಂದರ್ಭದಲ್ಲಿ ಮಳೆರಾಯನ ಧರೆಗಿಳಿದ ಪರಿಣಾಮ ಸಮ್ಮೇಳನಕ್ಕೆ ಹಾಕಲಾದ ಶಾಮಿಯಾನಿನಲ್ಲಿ ನೀರು ಸೇರಿದ್ದರಿಂದ ಸಮ್ಮೇಳನಕ್ಕೆ ಆಗಮಿಸಿದ್ದ ಕನ್ನಢಾಭಿಮಾನಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು .
ನಿಕಟಪೂರ್ವ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೋ. ಜ್ಯೋತಿ ಹೊಸೂರ, ನೀಲಗಂಗಾ ಚರಂತಿಮಠ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಜ್ಯೋತಿ ಬದಾಮಿ, ಮಾಜಿ ನಗರಾಧ್ಯಕ್ಷರಾದ ಶಿದ್ಲಿಂಗ ದಳವಾಯಿ, ಎಸ್.ಎ. ಕೋತವಾಲ, ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಮುಖಂಡ ಅಶೋಕ ಪೂಜೇರಿ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಶ್ಯಾಮಾನಂದ ಪೂಜೇರಿ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಮುರಳೀಧರ ತಳ್ಳಿಕೇರಿ, ತಾಪಂ ಇಓ ಬಸವರಾಜ ಹೆಗ್ಗನಾಯ್ಕ, ಪೌರಾಯುಕ್ತ ವಿಠ್ಠಲ ತಡಸಲೂರ, ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಕಸಾಪ ಅಧ್ಯಕ್ಷರುಗಳು, ಕನ್ನಡಪರ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು. ಚಿಂತಕ ಡಾ.ಗುರುರಾಜ ಕರಜಗಿ ಅವರು ವಿಶೇಷ ಉಪನ್ಯಾಸ ನೀಡಿದರು.
ಆರಂಭದಲ್ಲಿ ವಿದ್ಯಾ ಮಗುದಮ್ಮ ಪ್ರಾರ್ಥಿಸಿದರು. ಕಸಾಪ ತಾಲೂಕಾ ಅಧ್ಯಕ್ಷ ಮಹಾಂತೇಶ ತಾಂವಶಿ ಸ್ವಾಗತಿಸಿದರು. ಪ್ರೋ. ಚಂದ್ರಶೇಖರ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ಕಾಕಡೆ ಮತ್ತು ಶೈಲಾ ಕೊಕ್ಕರಿ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು. ಸಿದ್ರಾಮ ದ್ಯಾಗಾನಟ್ಟಿ ವಂದಿಸಿದರು.