ಗೋಕಾಕ:ನೆಲ, ಜಲ, ಭಾಷೆಯನ್ನು ಉಳಿಸಿಕೊಂಡರೆ ನಾವು ಬದುಕಲು ಸಾಧ್ಯ : ಡಿ.ದೇವರಾಜ
ನೆಲ, ಜಲ, ಭಾಷೆಯನ್ನು ಉಳಿಸಿಕೊಂಡರೆ ನಾವು ಬದುಕಲು ಸಾಧ್ಯ : ಡಿ.ದೇವರಾಜ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 2 :
ನೆಲ, ಜಲ, ಭಾಷೆಯನ್ನು ಉಳಿಸಿಕೊಂಡರೆ ನಾವು ಬದುಕಲು ಸಾಧ್ಯವೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ ಹೇಳಿದರು.
ಮಂಗಳವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಸ್ತು ಪ್ರದರ್ಶನ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವೃಕ್ಷ ಸಂಪತ್ತು, ಪ್ರಾಣಿ ಸಂಪತ್ತು, ಜಲ ಸಂಪತ್ತನ್ನು ರಕ್ಷಿಸಿದರೇ ಪ್ರಕೃತಿ ವಿಕೋಪಗಳಾಗುವುದನ್ನು ತಡೆಯಬಹುದು. ಇಂದು ಜಲಕ್ಷಾಮ ಎಲ್ಲೆಡೆ ಹೆಚ್ಚುತ್ತಿದ್ದು, ಇದಕ್ಕೆಲ್ಲಾ ಪರಿಸರ ನಾಶವೇ ಪ್ರಮುಖ ಕಾರಣವಾಗಿದೆ. ವಿದ್ಯಾರ್ಥಿಗಳು ಪರಿಸರ ರಕ್ಷಣೆಗೆ ಮುಂದಾಗಿ, ಇತರಲ್ಲೂ ಅರಿವು ಮೂಡಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ ಎಸ್.ಡಿ.ಮುರಗೋಡ ಮಾತನಾಡಿ ಪರಿಸರ ರಕ್ಷಣೆ ಹಾಗೂ ಮಾನವೀಯತೆಯಂತಹ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಆಸ್ತಿಗಳಾಗಿರೆಂದು ಹಾರೈಸಿದರು.
ಪರಿಸರ ದಿನಾಚರಣೆ ನಿಮಿತ್ಯ ಅಂತರಶಾಲಾ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಕುರಿತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳು ಪ್ಲಾಸ್ಟಿಕ್‍ನಿಂದಾಗುವ ದುಷ್ಪರಿಣಾಮಗಳ ಕುರಿತು ನೃತ್ಯದ ಮೂಲಕ ಜಾಗೃತಿ ಮೂಡಿಸಿದರು.
ವೇದಿಕೆ ಮೇಲೆ ವಲಯ ಅರಣ್ಯಾಧಿಕಾರಿ ಕೆಂಪಣ್ಣ ವಣ್ಣೂರ, ಕ್ಷೇತ್ರ ಸಮನ್ವಯ ಅಧಿಕಾರಿ ಎಮ್.ಬಿ.ಪಾಟೀಲ, ಮುಖ್ಯೋಪಾಧ್ಯಾಯ ಎಮ್.ಸಿ.ವಣ್ಣೂರ ಇದ್ದರು.
ಶಿಕ್ಷಕಿಯರಾದ ಸ್ಮೀತಾ ಭಂಡಾರಿ ಸ್ವಾಗತಿಸಿದರು, ಎನ್.ಜೆ.ಮಕಾನದಾರ ನಿರೂಪಿಸಿದರು, ಸುನಂದಾ ನೇವಡಿ ವಂದಿಸಿದರು.