ಬೆಳಗಾವಿ:ಮಾನವನ ಮನಸ್ಸಿಗೆ ಬಂದ ನಡೆಯಿಂದ ನಿಸರ್ಗದ ಪ್ರಕೋಪ-ಮೌಲಾನಾ ಸಜ್ಜಾದಸಾಹೇಬ ನೋಮಾನಿ
ಮಾನವನ ಮನಸ್ಸಿಗೆ ಬಂದ ನಡೆಯಿಂದ ನಿಸರ್ಗದ ಪ್ರಕೋಪ-ಮೌಲಾನಾ ಸಜ್ಜಾದಸಾಹೇಬ ನೋಮಾನಿ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಜು.22-
ಮಾನವ ಇಂದು ಮನಸ್ಸಿಗೆ ಬಂದಂತೆ ಜೀವನ ನಡೆಸುತ್ತಿರುವದರಿಂದ ನಿಸರ್ಗವು ಸಹ ಇಂದು ತನ್ನ ದಿಕ್ಕು ಬದಲಿಸುತ್ತಿದೆ ಎಂದು ಮಹಾರಾಷ್ಟ್ರದ ನೇರಲದ ಹಜರತ್ ಮೌಲಾನಾ ಸಜ್ಜಾದಸಾಹೇಬ ನೋಮಾನಿ ಹೇಳಿದರು.
ಇಲ್ಲಿಯ ಅನ್ನಪೂರ್ಣವಾಡಿಯಲ್ಲಿಯ ಮಕ್‍ತಬ್-ಎ-ನೋಮಾನಿಯಾದಲ್ಲಿ ಏರ್ಪಡಿಸಿದ ಪ್ರವಚನ (ಮಜಲೀಸ್) ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.
ಇಂದು ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಮಾಯವಾಗಿವೆ. ಇದರಿಂದ ನಿಸರ್ಗವು ಕೂಡಾ ಭೂಮಿಯ ಮೇಲೆ ಪೂರಕ ವಾತಾವರಣ ನಿರ್ಮಿಸದೆ ಇಡೀ ಜಗತ್ತಿನಾದ್ಯಂತ ವಿನಾಶವೇ ಸೃಷ್ಟಿಸುತ್ತಿದೆ ಎಂದು ಹೇಳಿ ಖೇದ ವ್ಯಕ್ತ ಪಡಿಸಿದ ಅವರು ಮಾನವರು ಜಾತಿ, ವರ್ಣ ಭೇದಭಾವಗಳನ್ನು ಬದಿಗೊತ್ತಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪರಸ್ವರ ಪ್ರೀತಿ-ವಿಶ್ವಾಸ ಹಾಗೂ ಸಹಕಾರದಿಂದ ಬಾಳಿ ಮುಂದಿನ ಜನಾಂಗಕ್ಕೆ ಉತ್ತಮ ಸಮಾಜ ನೀಡಬೇಕಾಗಿದ್ದು ಅತ್ಯವಶ್ಯ ಎಂದು.
ಭೂಮಿಯ ಮೇಲಿನ ಅಂರ್ತಜಲ ಮಟ್ಟ ಕುಸಿಯುತ್ತಿದ್ದು, ನೀರಿಗಾಗಿ ಬರುವ ದಿನಗಳಲ್ಲಿ ಯುದ್ಧ ನಡೆದರೆ ಯಾವುದೇ ಆಶ್ಚರ್ಯ ಪಡಬೇಕಾಗಿಲ್ಲ. ಪರಿಸರ ಸಂರಕ್ಷಣೆ, ಣಿರಿನ ಮಿತವ್ಯ ಬಳಕೆ, ನದಿಗಳ ಸ್ವಚ್ಛತೆ ಕಾಪಾಡಿಕೊಂಡರೆ ಅಂರ್ತಜಲ ಮಟ್ಟವನ್ನು ಸುಧಾರಿಸಿ ನೈಸರ್ಗಿಕವಾಗಿ ಭಾರತವನ್ನು ಕಟ್ಟಲು ದೇಶವನ್ನಾಳುವ ರಾಜಕೀಯ ನಾಯಕರು ಮುಂದಾಗಬೇಕಾಗಿದೆ. ರೈತರ ಬೆಳೆದ ಬೆಳೆಗೆ ಸಿಗಬೇಕಾದ ವೈಜ್ಞಾನಿಕ ಬೆಲೆ ಈಗ ದೊರೆಯುತ್ತಿಲ್ಲವಾದ್ದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ದೇಶದಲ್ಲಿ ಅತೀವೃಷ್ಟಿ, ಆನಾವೃಷ್ಟಿಯಂತಹ ಪ್ರಕರಣಗಳು ಉದ್ಭವಿಸಿ ಸಾಕಷ್ಟು ಹಾನಿ ಆಗುತ್ತಿದೆ. ಭಾರತದ ರೈತರು, ಬಡವರು, ಕಡುಬಡವರು, ನಿರ್ಗತಿಕರು, ಅನಾಥರು, ಕೂಲಿ ಕಾರ್ಮಿಕರು, ಶೋಷಿತರು, ವಿಧವೆಯರು, ಪ್ರತಿನಿತ್ಯ ದಯನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಎಲ್ಲವನ್ನು ಗಂಭೀರವಾಗಿ ಪರಿಗಣಿಸಿ ನಿಃಸ್ವಾರ್ಥ ಸೇವೆಗೈಯಲು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರಕಾರಗಳು ಮತ್ತು ಜನರು ಮುಂದಾಗಿ ಭವ್ಯ ಭಾರತವನ್ನು ಕಟ್ಟಬೇಕಾಗಿದೆ. ಆ ದಿಶೆಯಲ್ಲಿ ನೆರಲನ ಮಕ್‍ತಬ್-ಎ- ನೋಮಾನಿಯಾ ಆಶ್ರಯದಲ್ಲಿ ರಹೇಮಾನ ಫೌಂಡೇಷನ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು ಬರುವ ದಿನಗಳಲ್ಲಿ ಈ ಸಂಸ್ಥೆ ತನ್ನ ಕಾರ್ಯಾರಂಭ ಮಾಡಲಿದೆ ತಿಳಿಸಿ ಈ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ವೃದ್ಧಾಶ್ರಮ, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಉಚಿತ ಆರೋಗ್ಯ ಶಿಬಿರ ಮತ್ತು ಔಷಧಿ ವಿತರಣೆ, ಶುದ್ಧ ನೀರಿನ ಘಟಕಗಳು, ನಿರ್ಗತಿಕರಿಗೆ ಉಚಿತ ಆಹಾರಧ್ಯಾನ ವಿತರಣಾ ಕೇಂದ್ರಗಳು, ವಿಧವೆಯರಿಗೆ ಮತ್ತು ಅನಾಥ ಹೆಣ್ಣು ಮಕ್ಕಳಿಗೆ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೆಶಿಸಲಾಗಿದೆ. ಧಾರ್ಮಿಕವಾಗಿ ಸತ್ಕಾರ್ಯಗಳನ್ನು ಮಾಡುವದು ಒಂದೇ ಸನ್ಮಾರ್ಗವಲ್ಲ, ಬಡವರ, ದೀನದಲಿತರ, ಶೋಷಿತರ, ನಿರ್ಗತಿಕರ ಏಳ್ಗೆಗೆ ಸಹಕರಿಸುವದು ಇಂದಿನ ಅವಶ್ಯಕತೆಯಾಗಿದೆ. ಅವುಗಳನ್ನು ಪೂರೈಸುವತ್ತ ನಾವೆಲ್ಲ ಭಾರತೀಯರು ಒಗ್ಗಟ್ಟಿನಿಂದ ಹೆಜ್ಜೆ ಇಡಬೇಕಾಗಿದೆ ಎಂದು ಹಜರತ್ ಮೌಲಾನಾ ಸಜ್ಜಾದಸಾಬ ನೋಮಾನಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ, ಪಕ್ಕದ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದಿಂದ ನೂರಾರು ಜನ ಆಗಮಿಸಿದ್ದರು.