ಗೋಕಾಕ:ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಿದರೆ ತಾಲೂಕಿನ ಅಭಿವೃದ್ಧಿ ಸಾಧ್ಯ : ಡಾ. ಕೆ.ವ್ಹಿ. ರಾಜೇಂದ್ರ
ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಿದರೆ ತಾಲೂಕಿನ ಅಭಿವೃದ್ಧಿ ಸಾಧ್ಯ : ಡಾ. ಕೆ.ವ್ಹಿ. ರಾಜೇಂದ್ರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 30 :
ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುವ ಮೂಲಕ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಿದರೆ ತಾಲೂಕಿನ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವ್ಹಿ. ರಾಜೇಂದ್ರ ಅವರು ಗೋಕಾಕ-ಮೂಡಲಗಿ ತಾಲೂಕಿನ ಸರಕಾರಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅವರು ಸೋಮವಾರದಂದು ನಗರದ ತಾ.ಪಂ. ಸಭಾಭವನದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಕಾರ್ಯಗಳ ಪರಿಶೀಲನೆ ಸಭೆಯಲ್ಲಿ ಮಾತನಾಡುತ್ತಿದ್ದರು.
ತಾಲೂಕಿನ ಪ್ರತಿಯೊಬ್ಬ ಅಧಿಕಾರಿಯ ಕಾರ್ಯವ್ಯಾಪ್ತಿಯ ಬಗ್ಗೆ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳಿಗೆ ಕಾರ್ಯ ನಿರ್ವಹಿಸುವಾಗ ಏನಾದರೂ ಅಡಚಣಿ ಅಥವಾ ತೊಂದರೆ ಬಗ್ಗೆ ಕೇಳಿ ಅದಕ್ಕೆ ಪರಿಹಾರ ಸೂಚಿಸಿದರು.
ಡಾ. ರಾಜೇಂದ್ರ ಅವರು ವಿಶೇಷವಾಗಿ ಶಿಕ್ಷಣ ಮತ್ತು ಕುಡಿಯುವ ನೀರು ಮತ್ತು ಆರೋಗ್ಯ ಇಲಾಖೆಯ ಪ್ರತಿಯೊಂದು ವಿಷಯದ ಬಗ್ಗೆ ಕೂಲಂಕುಶ ವಿವರ ಪಡೆದುಕೊಂಡರಲ್ಲದೆ ತಾಲೂಕಿನ ಪ್ರತಿಯೊಂದು ಸರಕಾರಿ ಶಾಲೆಗೆ ಕಂಪೌಂಡ ಗೋಡೆ, ಶೌಚಾಲಯ ಮತ್ತು ಕ್ರೀಡಾ ಮೈದಾನದ ವ್ಯವಸ್ಥೆ ಕಡ್ಡಾಯವಾಗಿ ಒಂದು ತಿಂಗಳಲ್ಲಿ ಆಗುವಂತೆ ನೋಡಿಕೊಳ್ಳುವದು ಇಬ್ಬರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು. ಗ್ರಾಮದಲ್ಲಿಯ ಸಮುದಾಯ ಆಸ್ತಿಗಳ ನಿರ್ವಹಣೆಗೆ ಗ್ರಾಮ ಪಂಚಾಯತದಲ್ಲಿ ಪ್ರತ್ಯೇಕ ಅನುದಾನವಿದ್ದು ಅದನ್ನು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.
ಶಿಥಿಲಗೊಂಡಿರುವ ಶಾಲೆ, ಅಂಗನವಾಡಿ ಹಾಗೂ ಆಸ್ಪತ್ರೆ ಕಟ್ಟಡಗಳ ತುರ್ತು ಕಾಮಗಾರಿ ನಡೆಸಲು ಜಿಲ್ಲಾಧಿಕಾರಿಗಳ ನೈಸರ್ಗಿಕ ಫಂಡದಲ್ಲಿ ಅನುದಾನ ಪಡೆಯಬಹುದಾಗಿದ್ದು ಅಂಥ ಶಾಲೆ, ಅಂಗನವಾಡಿ, ಆಸ್ಪತ್ರೆಗಳ ರಿಪೇರಿಗಾಗಿ ಎಸ್ಟಿಮೇಟ ತಯಾರಿಸಿ ತಹಶೀಲದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕೆಂದು ಹೇಳಿದರು.
ಬಿಇಓ ಅವರು ತಮ್ಮ ವ್ಯಾಪ್ತಿಯಲ್ಲಿ ಯಾವ ಶಾಲೆಯಲ್ಲಿ ಯಾವ ವಿಷಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಆ ವಿಷಯದ ಶಿಕ್ಷಕರಿಗೆ ಶೋಕಾsಸ್ ನೋಟೀಸು ನೀಡುವದರ ಜೊತೆಗೆ ಅವರು ಫಲಿತಾಂಶ ಹೆಚ್ಚಿಸುವಂತೆ ಕ್ರಮ ಕೈಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನು ಹೆಚ್ಚೆಚ್ಚು ಶಿಕ್ಷಿತರನ್ನಾಗಿ ಮಾಡುವಂತೆ ತಿಳಿಸಿದರು. ಇದಲ್ಲದೆ ತಾಲೂಕಿನ ಉಳಿದ ಅಧಿಕಾರಿಗಳನ್ನು ಸಹ ಪ್ರತಿಯೊಂದು ಶಾಲೆಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಶಾಲೆಯು ಶೈಕ್ಷಣಿಕವಾಗಿ ಗುಣಮಟ್ಟದ ಶಿಕ್ಷಣ ದೊರೆಯುವದರ ಕಡೆಗೆ ನಿಗಾ ವಹಿಸುವಂತೆ ಸೂಚಿಸಿದರಲ್ಲದೆ ನೋಡಲ್ ಅಧಿಕಾರಿಗಳಾಗಿ ನೇಮಕಗೊಂಡವರು ತಮ್ಮ ಮಕ್ಕಳ ಕಲಿಯುವ ರೀತಿಯಲ್ಲಿ ಶಾಲೆಯ ಮಕ್ಕಳನ್ನು ನೋಡಿಕೊಳ್ಳಬೇಕೆಂದು ಸೂಚಿಸಿದರು.
ಸರಕಾರ ನೀಡುವ ಬೈಸಿಕಲ್, ಶೂ-ಸಾಕ್ಸಗಳು ಒಳ್ಳೇ ಗುಣಮಟ್ಟದ ಇವೆಯೆಂದು ನೋಡಿಕೊಳ್ಳಬೇಕು. ಅದರಲ್ಲಿ ವ್ಯತ್ಯಾಸವಾದರೆ ಕೂಡಲೇ ಡಿಡಿಪಿಐ ಅವರಿಗೆ ವರದಿ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಸರಕಾರಿ ವಸತಿ ನಿಲಯಗಳಲ್ಲಿಯ ವಿದ್ಯಾರ್ಥಿಗಳು ಫೇಲಾಗದಂತೆ ನೋಡಿಕೊಳ್ಳಬೇಕು. ಮತ್ತು ಮಕ್ಕಳು ಫೇಲಾದರೆ ಅದಕ್ಕೆ ವಾರ್ಡನ್ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವದೆಂದು ಎಚ್ಚರಿಸಿದರು.
ಒಟ್ಟಾರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಕ್ಷಣ ಇಲಾಖೆ ಮತ್ತು ಸರಕಾರಿ ವಸತಿ ನಿಲಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿ ಹಲವಾರು ಸಲಹೆಗಳನ್ನು ನೀಡಿದರು.
ಪಶು ಸಂಗೋಪನಾ ಇಲಾಖೆಯ ಕಾರ್ಯದ ಪರಿಶೀಲನೆ ನಡೆಸುವಾಗ ಪ್ರತಿ ಗ್ರಾ.ಪಂ.ಗೆ ಒಂದರಂತೆ ತಾಲೂಕಿನಲ್ಲಿ ಒಟ್ಟು 10 ಕಮ್ಯುನಿಟಿ ಕ್ಯಾಟಲ್ ಶೆಡ್ ನಿರ್ಮಾಣ ಮಾಡಬೇಕು. ಮತ್ತು ಪಶುಗಳನ್ನು ಪಡೆದ ಪ್ರತಿಯೊಬ್ಬರು ದನಗಳ ಶೆಡ್ ನಿರ್ಮಾಣ ಮಾಡಿಕೊಳ್ಳುವಂತೆ ಸೂಚಿಸಬೇಕೆಂದು ಪಶುಪಾಲನೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅಭಿವೃದ್ಧಿಯಲ್ಲಿ ನಾವು ಇನ್ನೂ ದೂರ ಸಾಗಬೇಕಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ಅಧಿಕಾರಿಯೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಆತ್ಮಗೌರವ, ಗೌರವ ಹೆಚ್ಚಾಗುತ್ತದೆ ಎಂದು ತಿಳಿಸಿದರಲ್ಲದೆ ನನ್ನಿಂದ ಏನು ಆಗಬೇಕು ಎಂದು ತಿಳಿಸಿದರೆ ಸಹಾಯ ಮಾಡುವದಾಗಿ ತಿಳಿಸಿ ತಾಲೂಕಿನ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಭೂಸೇನಾ ನಿಗಮದ ಅಧಿಕಾರಿಯನ್ನು ಹೊರತು ಪಡಿಸಿ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು. ಅವರಿಗೆ ಕೂಡಲೇ ಕಾರಣ ಕೇಳಿ ನೋಟಿಸ್ ನೀಡುವಂತೆ ತಾ.ಪಂ ಅಧಿಕಾರಿ ಸೂಚನೆ ನೀಡಿದರು.
ಮಧ್ಯಾನ್ಹದ ಭೋಜನದ ನಂತರ ಪಿಡಿಓಗಳ ಸಭೆ ಜರುಗಿತು.
ಬಾಕ್ಸ:-1 ಗ್ರಾಮ ಪಂಚಾಯತಿಗಳಲ್ಲಿ ಬೇಡದ ಕೆಲಸಗಳು ಬಹಳಷ್ಟು ನಡೆಯುತ್ತಿವೆ. ಸರಕಾರಿ ಅಧಿಕಾರಿಗಳಾದ ನಾವು ಜನರ ಸೇವೆ ಮಾಡಲು ಬಂದಿದ್ದೇವೆ. ಪಿಡಿಓಗಳು ಗ್ರಾ.ಪಂ.ಗಳಲ್ಲಿ ಇದ್ದು ಸರಿಯಾಗಿ ಕೆಲಸ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡಿದರೆ ಗ್ರಾಮಗಳು ಉದ್ದಾರವಾಗುತ್ತವೆ.-ಡಾ. ಕೆ.ವ್ಹಿ. ರಾಜೇಂದ್ರ. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಬಾಕ್ಸ್-2 ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಇತ್ತೀಚೆಗೆ 50 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆಯ ಕಡೆಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವ್ಹಿ. ರಾಜೇಂದ್ರ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಈಗಾಗಲೆ ಬಿಸಿಯೂಟ ನೀಡುತ್ತಿದ್ದ ಎನ್‍ಜಿಓ ರದ್ದುಗೊಳಿಸಿ ಶಾಲೆಯಲ್ಲಿಯೇ ಶಿಕ್ಷಕರು ಬಿಸಿಯೂಟ ತಯಾರಿಸಿ ನೀಡುವದು ಪ್ರಾರಂಭವಾಗಿದೆ. ಇನ್ನು ಮುಂದೆ ಅಂಥ ಘಟನೆ ನಡೆಯುವದಿಲ್ಲ ಎಂದು ತಿಳಿಸಿದರು.
ತಾಲೂಕಿನ ಗಿಳಿಹೊಸೂರ ಗ್ರಾಮದಲ್ಲಿ ಚಿಕನ್‍ಗುನ್ಯಾ ಹಾವಳಿ ಹೆಚ್ಚಿದ್ದರ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ನಾಳೆಯೇ ಆರೋಗ್ಯ ಇಲಾಖೆಯವರ ಜೊತೆಗೆ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ, ರೋಗ ಹಬ್ಬಲು ಕಾರಣ ಮತ್ತು ಉಪಚಾರದ ಬಗ್ಗೆ ವರದಿ ಸಲ್ಲಿಸುವಂತೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದರು.