ಘಟಪ್ರಭಾ:ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೋಳಿ : ಮಾಜಿ ಸಚಿವ ಬಾಲಚಂದ್ರ ಸಲಹೆ
ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೋಳಿ : ಮಾಜಿ ಸಚಿವ ಬಾಲಚಂದ್ರ ಸಲಹೆ
ಘಟಪ್ರಭಾ ಜು 15: ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಎಸ್‍ಎಫ್‍ಎಸಿ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಇದರಿಂದ ರೈತರು ಹೆಚ್ಚಿನ ಆದಾಯ ಗಳಿಸಲು ಪೂರಕವಾಗುತ್ತದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಶಿಂಧಿಕುರಬೇಟ ಕ್ರಾಸ್‍ನಲ್ಲಿ ಶುಕ್ರವಾರ ಸಂಜೆ ವಿವೇಕಾನಂದ ತೋಟಗಾರಿಕೆ ರೈತ ಉತ್ಪಾದಕರ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರಲ್ಲಿ ಸಾಂಘಿಕ ಸಾಮಥ್ರ್ಯ ಹೆಚಿಸುವುದು, ಮಧ್ಯವರ್ತಿಗಳ ಹಾವಳಿ ಪ್ರಮಾಣ ತಡೆಗಟ್ಟುವುದು ಬೇಸಾಯ ವೆಚ್ಚದಲ್ಲಿ ಕಡಿತ ಮಾಡುವುದು ನೇರ ಹಾಗೂ ಉತ್ತಮ ಮಾರುಕಟ್ಟೆಗಳ ಮೂಲಕ ಆದಾಯದಲ್ಲಿ ಹೆಚ್ಚಳ ಮಾಡುವುದು ಈ ಯೋಜನೆಯ ಉದ್ಧೇಶವಾಗಿದೆ ಎಂದು ತಿಳಿಸಿದರು.
15 ಲಕ್ಷ ಆವರ್ತಿತ ನಿಧಿಯಾಗಿ ಕಂಪನಿಯ ಖಾತೆಗೆ ಬಿಡುಗಡೆ ಮಾಡಲಾಗಿದೆ. 25 ಲಕ್ಷ ರೂ.ಗಳ ಕೃಷಿ ಯಂತ್ರಗಳ ಖರೀದಿಗಾಗಿ ರೈತರಿಗೆ ಶೇ 90 ರಷ್ಟು ರಿಯಾಯತಿ ನೀಡಿ ಕಡಿಮೆ ಬಾಡಿಗೆ ಆಧಾರದ ಮೇಲೆ ಕೃಷಿ ಯಂತ್ರಗಳನ್ನು ರೈತರು ಖರೀದಿಸಬಹುದು. ರೈತರ ಅನುಕೂಲಕ್ಕಾಗಿ ವಿವಿಧ ರೀತಿಯ ವ್ಯವಸ್ಥೆಗಳನ್ನು ತೋಟಗಾರಿಕೆ ಇಲಾಖೆ ಮಾಡಿದ್ದು, ಬೆಳೆ ವಿಮೆ, ರೈತರಿಗೆ ಸಾಲ ಸೌಲಭ್ಯ ಮುಂತಾದ ವ್ಯವಸ್ಥೆಗಳನ್ನು ಕಂಪನಿ ಹೊಂದಿದೆ. ಸೂಕ್ತವಾದ ಸಂಸ್ಕರಣಾ ಘಟಕ ಸ್ಥಾಪಿಸಲು ಶೇ 90 ರಷ್ಟು ಅನುದಾನವನ್ನು ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.
ರಾಜಾಪೂರ, ತುಕ್ಕಾನಟ್ಟಿ, ಅರಭಾವಿ, ಶಿಂಧಿಕುರಬೇಟ, ದಂಡಾಪೂರ, ದುರದುಂಡಿ, ನಾಗನೂರ, ಕಲ್ಲೋಳಿ, ಮಲ್ಲಾಪೂರ ಪಿಜಿ, ಬಡಿಗವಾಡ, ಫಾಮಲದಿನ್ನಿ ಗ್ರಾಮಗಳಲ್ಲಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯು ಹೊಂದಿದ್ದು, ತರಕಾರಿಗಳನ್ನು ಹೆಚ್ಚಾಗಿ ಬೆಳೆಯುವ ಗ್ರಾಮಗಳನ್ನು ಗುರುತಿಸಿ ಈ 11 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ವಿವೇಕಾನಂದ ತೋಟಗಾರಿಕೆ ರೈತ ಉತ್ಪಾದಕರ ಸಂಘದ ಅಧ್ಯಕ್ಷ ರಾಜು ಬೈರುಗೋಳ, ಉಪಾಧ್ಯಕ್ಷ ಬಸಪ್ಪ ಕಮತಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಪ್ರಭಾಶುಗರ ಮಾಜಿ ನಿರ್ದೇಶಕ ಬಸವಂತ ಕಮತಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಶಿಂಧಿಕುರಬೇಟ ಗ್ರಾಪಂ ಅಧ್ಯಕ್ಷ ದಾವುದ ದಬಾಡಿ, ಗುರು ಕಡೇಲಿ, ಶಿದ್ಲಿಂಗ ನೇರ್ಲಿ, ಆದಂಸಾಬ ಮಕಾನದಾರ, ಶಂಕರ ಖಂಡುಗೋಳ, ಸುಧೀರ ಜೋಡಟ್ಟಿ, ಗಣಪತಿ ಈಳಿಗೇರ, ತೋಟಗಾರಿಕೆ ಉಪನಿರ್ದೇಶಕ ಐ.ಕೆ. ದೊಡಮನಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಎಲ್.ಜನಮಟ್ಟಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಬಾಲಚಂದ್ರ ಜಾರಕಿಹೊಳಿ, ಶಾಸಕರು, ಅರಭಾವಿ :
ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ರೈತ ಸಮೂಹ ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಬೇಕು. ಹನಿ ನೀರಾವರಿಯಿಂದ ಹೆಚ್ಚಿನ ಇಳುವರಿ ಬರುತ್ತದೆ. ಇದರಿಂದ ಭೂಮಿಯು ಫಲವತ್ತತೆಯಿಂದ ಕೂಡಿರುತ್ತದೆ. ಕೇವಲ ಕಬ್ಬಿನ ಬೆಳೆಗೆ ಆಶ್ರಯಿಸದೆ ತೋಟಗಾರಿಕೆಯ ವಿವಿಧ ಬೆಳೆಗಳನ್ನು ಬೆಳೆಸುವ ಮೂಲಕ ರೈತ ಸಮೂಹ ಆರ್ಥಿಕಾಭಿವೃದ್ಧಿ ಹೊಂದಬೇಕು. ಹಿಂದೆಂದೂ ಕಂಡಿರದ ಬರಗಾಲದ ಹಿನ್ನೆಲೆಯಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿ ಉತ್ಪಾದಿಸಲು ರೈತ ಸಮೂಹ ಮುಂದಾಗಬೇಕು.