RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಪ್ರವಾಹದಿಂದ ಅಂದಾಜು 800 ಕೋಟಿ ರೂ. ನಷ್ಟ : ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ

ಗೋಕಾಕ:ಪ್ರವಾಹದಿಂದ ಅಂದಾಜು 800 ಕೋಟಿ ರೂ. ನಷ್ಟ : ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ 

ಪ್ರವಾಹದಿಂದ ಅಂದಾಜು 800 ಕೋಟಿ ರೂ. ನಷ್ಟ : ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ

 

 

 

 

ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ಥರ ಅಹವಾಲು ಸ್ವೀಕರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 6 :

 
ಘಟಪ್ರಭಾ ನದಿ ನೀರಿನಿಂದ ಪ್ರವಾಹದ ಭೀತಿ ಎದುರಿಸುತ್ತಿರುವ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಹಲವು ಗ್ರಾಮಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಖುದ್ದು ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದರು.
ನದಿ ತೀರದ ಗ್ರಾಮಗಳಾದ ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ, ತಿಗಡಿ, ಸುಣಧೋಳಿಗೆ ಅಧಿಕಾರಿಗಳೊಂದಿಗೆ ಮಂಗಳವಾರದಂದು ಭೇಟಿ ಮಾಡಿ ಸಂತ್ರಸ್ಥ ಕುಟುಂಬಗಳ ಅಹವಾಲು ಸ್ವೀಕರಿಸಿದರು.
ಜೊತೆಗೆ ಎಲ್ಲ ಪ್ರವಾಹ ಬಾಧಿತ ಗ್ರಾಮಗಳ ಕುಟುಂಬಗಳಿಗೆ ತಕ್ಷಣ ಬೇರೆಡೆಗೆ ಸುರಕ್ಷಿತ ಸ್ಥಳಗಳಿಗೆ ಹಾಗೂ ಗ್ರಾಮದ ಸುತ್ತಮುತ್ತಲಿರುವ ಸರ್ಕಾರಿ ಸ್ವಾಮ್ಯದ ಕಟ್ಟಡಗಳಲ್ಲಿ ಪ್ರಾರಂಭಿಸಿರುವ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಈ ಕುರಿತು ಸಂತ್ರಸ್ಥ ಕುಟುಂಬಸ್ಥರನ್ನು ಖುದ್ಧು ಭೇಟಿ ಮಾಡಿ ಮುಂಜಾಗ್ರತಾ ಕ್ರಮವಾಗಿ ಬೇರೆಡೆ ಕೂಡಲೇ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದರು.
ನಂತರ ಕೆಲವು ಸರ್ಕಾರದ ವತಿಯಿಂದ ತಾತ್ಕಾಲಿಕವಾಗಿ ಆರಂಭಿಸಲಾಗಿರುವ ಸಂತ್ರಸ್ಥರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ನೀಡುವ ಆಹಾರ ಮತ್ತು ಇತರ ಸೌಲಭ್ಯಗಳನ್ನು ಪರಿಶೀಲಿಸಿದರು. ಇನ್ನು ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೇವು ಜೊತೆಗೆ ಜಾಗ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
800 ಕೋಟಿ ರೂ. ನಷ್ಟ : ಕಳೆದೊಂದು ವಾರದಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಪ್ರವಾಹದಿಂದಾಗಿ ಅಂದಾಜು 800 ಕೋಟಿ ರೂ.ಗಳಷ್ಟು ನಷ್ಟವಾಗಿದೆ. 400 ಕೋಟಿ ರೂ.ಗಳಷ್ಟು ಬೆಳೆಗಳ ಹಾನಿ, 200 ಕೋಟಿ ರೂ.ಗಳಷ್ಟು ರಸ್ತೆಗಳ ಹಾನಿ, 200 ಕೋಟಿ ರೂ.ಗಳಷ್ಟು ಸಂತ್ರಸ್ಥರ ವಸತಿ, ಸರ್ಕಾರಿ ಕಟ್ಟಡಗಳ ಕುಸಿತಗೊಂಡು ಹಾನಿಗೊಳಗಾಗಿವೆ ಎಂದು ಅಂಕಿಅಂಶದ ಮಾಹಿತಿ ನೀಡಿದರು.
ಕಳೆದ 10 ವರ್ಷಗಳ ನಂತರ ಘಟಪ್ರಭಾ ಜಲಾಶಯ, ಹಿರಣ್ಯಕೇಶಿ ನದಿ, ಮಾರ್ಕಂಡೇಯ ನದಿಗಳ ಮೂಲಕ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಇದರಿಂದ ನದಿ ತೀರದ 30ಕ್ಕೂ ಹೆಚ್ಚು ಗ್ರಾಮಗಳು ಬಾಧಿತಗೊಂಡಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಿಎಂ ಯಡಿಯೂರಪ್ಪ ಅವರಿಗೆ ಮನವಿ : ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ 30ಕ್ಕೂ ಅಧಿಕ ಗ್ರಾಮಗಳ ಸಂತ್ರಸ್ತ ಕುಟುಂಬಗಳಿಗಾದ ನಷ್ಟವನ್ನು ಸರ್ಕಾರದಿಂದ ನೀಡಲಿಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಜಿಲ್ಲಾಡಳಿತದ ಮೂಲಕ ಸಮಗ್ರ ವರದಿ ನೀಡುತ್ತೇನೆ. ಸಂತ್ರಸ್ಥರಿಗೆ ಪರಿಹಾರ ಕೊಡಿಸುವ ಜವಾಬ್ದಾರಿ ನನ್ನದು ಎಂದು ಅವರು ಸಂತ್ರಸ್ಥ ಕುಟುಂಬಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಯ ಹಸ್ತ ನೀಡಿದರು.
1.45 ಲಕ್ಷ ಕ್ಯೂಸೆಕ್ಸ್ ನೀರು ಹರಿವು : 51 ಟಿಎಂಸಿ ಸಾಮಥ್ರ್ಯದ ಹಿಡಕಲ್ ಜಲಾಶಯವು ಈಗ ಭರ್ತಿಯಾಗಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿಗೆ ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳು ಸೇರಿ ಒಟ್ಟು 1.45 ಲಕ್ಷ ಕ್ಯೂಸೆಕ್ಸ್ ನೀರು ಹೆಚ್ಚುವರಿಯಾಗಿ ಹರಿದು ಬರುತ್ತಿದೆ. ಹಿಂದೆಂದೂ ಕಂಡರಿಯದ ಪ್ರವಾಹ ಭೀತಿ ಈಗ ಎದುರಾಗಿದೆ. 1994, 2004, 2005, 2009 ರಲ್ಲಿ ಈ ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದವು. ದಶಕಗಳ ನಂತರ ಮತ್ತೊಮ್ಮೆ ಪ್ರವಾಹ ಭೀತಿ ನಮಗೆ ಎದುರಾಗಿದೆ. ಸಂತ್ರಸ್ಥರು ಯಾವುದೇ ಕಾರಣಕ್ಕೆ ಭಯಭೀತರಾಗಬೇಡಿ. ರಾತ್ರಿಯೊಳಗೆ ಮತ್ತೇ ನೀರಿನ ಮಟ್ಟ ಹೆಚ್ಚಳವಾಗಲಿದ್ದು, ಈಗಲೇ ತಮ್ಮ ವಾಸಸ್ಥಳಗಳನ್ನು ತೊರೆದು ಸುರಕ್ಷಿತ ತಾಣಕ್ಕೆ ಹೋಗುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಈರಪ್ಪ ಬೀರನಗಡ್ಡಿ, ಸಿದ್ದಪ್ಪ ಹಂಜಿ, ಸತ್ತೆಪ್ಪ ಬಬಲಿ, ಭೀಮಪ್ಪ ಗೌಡಪ್ಪನವರ, ಅರ್ಜುನ ಸನದಿ, ಮಹಾದೇವ ಕಣವಿ, ನಾಗಪ್ಪ ಮಂಗಿ, ಭೂತಪ್ಪ ಗೊಡೇರ, ಹನಮಂತ ಕೊಪ್ಪದ, ರಂಗಪ್ಪ ಚಪ್ರಿ, ಪಾಂಡು ದೊಡಮನಿ, ಅಡಿವೆಪ್ಪ ಕಂಕಾಳಿ, ನೋಡಲ್ ಅಧಿಕಾರಿಗಳು, ಪಿಎಸ್‍ಐ ಹನಮಂತ ನರಳೆ, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.

Related posts: