ಕೇಂದ್ರಕ್ಕೆ ಎಚ್ಚರಿಕೆ ಸಂದೇಶ : ಹಿಂದಿ ಹೇರಿಕೆ ವಿರೋದಿಸಿ ಬೆಂಗಳೂರಿನಲ್ಲಿ ಕರವೇ ನೇತೃತ್ವದಲ್ಲಿ ದುಂಡು ಮೇಜಿನ ಸಭೆ
ಕೇಂದ್ರಕ್ಕೆ ಎಚ್ಚರಿಕೆ ಸಂದೇಶ : ಹಿಂದಿ ಹೇರಿಕೆ ವಿರೋದಿಸಿ ಬೆಂಗಳೂರಿನಲ್ಲಿ ಕರವೇ ನೇತೃತ್ವದಲ್ಲಿ ದುಂಡು ಮೇಜಿನ ಸಭೆ
ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರುತ್ತಿರುವ ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ ದಕ್ಷಿಣ ಭಾರತ ವ್ಯಾಪ್ತಿಯ ರಾಜ್ಯಗಳ ಹೋರಾಟಕ್ಕೆ ಕರವೇ ನಾರಾಯಣಗೌಡ ಬಣ ಮುನ್ನುಡಿ ಬರೆದಿದೆ.
ನಿನ್ನೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ನಡೆಸಿದ ದುಂಡು ಮೇಜಿನ ಸಭೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯ ಘಂಟೆ ನೀಡಿದೆ
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕರವೇ ನೇತೃತ್ವದಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಹಿಂದಿ ಹೇರಿಕೆ ಕುರಿತಂತೆ ನಡೆದ ಸಭೆಯಲ್ಲಿ ಮಹರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ಯ ಉಸ್ತುವಾರಿ ಸಂದೀಪ್ ದೇಶಪಾಂಡೆ, ಡಿಎಂಕೆಯ ಪ್ರಮುಖ ಮುಖಂಡರು, ಕೂಡಲ ಸಂಗಮದಿಂದ ಜಯ ಮೃತ್ಯುಂಜಯ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಾಹಿತಿಗಳಾದ ಬರಗೂರು, ಚಂಪಾ, ಕಮಲಾ ಹಂಪನಾ, ನಟ ಚೇತನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮತ್ರಿ ಚಂದ್ರು, ಬೆಂಗಳೂರು ತಮಿಳು ಸಂಘದ ಅಧ್ಯಕ್ಷ ದಾಮೋದರನ್, ಕೇರಳದ ಪ್ರಾದೇಶಿಕ ಸಂಘದ ಮನೋಹರ್ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ಭಾಷಾ ಹೋರಾಟಕ್ಕೆ ಈ ಸಭೆ ಹೊಸ ಆಯಾಮ ನೀಡಿದೆ. ಹಿಂದಿ ಹೇರಿಕೆಗೆ ದೊಡ್ಡ ಇತಿಹಾಸ ಇದೆ. ಹಿಂದಿ ಹೇರಿಕೆ ವಿರೋಧಿಸುತ್ತೇವೆ ಅಂದರೆ ಹಿಂದಿ ಭಾಷಿಕರನ್ನು ವಿರೋಧಿಸುತ್ತೇವೆ ಅಂತಾ ಅಲ್ಲ. ಹಿಂದಿ ರಾಷ್ಟ್ರಭಾಷೆ ಅಂತಾ ಕೆಲ ರಾಜಕೀಯ ಮುಖಂಡರು ಹೇಳುತ್ತಿದ್ದಾರೆ. ಅವರು ಸಂವಿಧಾನವನ್ನು ಸರಿಯಾಗಿ ಓದಿಕೊಂಡಿಲ್ಲ ಅನಿಸುತ್ತದೆ. ದೇಶದಲ್ಲಿ ಎಲ್ಲಾ ಭಾಷೆಗಳಿಗೆ ಸಮಾನ ಸ್ಥಾನಮಾನ ಸಿಗಬೇಕು. ದೇಶದಲ್ಲಿ ಹಿಂದಿಯನ್ನು ಹೆಚ್ಚು ಪ್ರಚಲಿತದಲ್ಲಿರುವ ಭಾಷೆ ಎಂದು ಬಿಂಬಿಸಲಾಗ್ತಿರೋದು ವಿಪರ್ಯಾಸ ಎಂದರು.