ಗೋಕಾಕ:ಪ್ರವಾಹವನ್ನು ಎದುರಿಸಿ ಪವಾಡ ರೀತಿಯಲ್ಲಿ ಈಜಿ ದಡ ಸೇರಿದ ಸಾಹಸಿ ಯುವಕ
ಪ್ರವಾಹವನ್ನು ಎದುರಿಸಿ ಪವಾಡ ರೀತಿಯಲ್ಲಿ ಈಜಿ ದಡ ಸೇರಿದ ಸಾಹಸಿ ಯುವಕ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 8 :
ಮಾರ್ಕಂಡೇಯ ನದಿ ಪ್ರವಾಹದಿಂದಾಗಿ ತೋಟ (ನಡುಗಡ್ಡೆ) ಯಲ್ಲಿ ಸಿಲುಕಿದ ಯುವಕ ಗುರುವಾರದಂದು ಪ್ರವಾಹವನ್ನು ಈಜಿ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಳೆದ 4-5 ದಿನಗಳಿಂದ ನಗರದ ಹೊರವಲಯದಲ್ಲಿರುವ ಯೋಗಿಕೊಳ್ಳ ರಸ್ತೆಯ ಘಟ್ಟಿ ಬಸವಣ್ಣ ದೇವಸ್ಥಾನ ಹತ್ತಿರವಿರುವ ಹೆಜ್ಜೆಗಾರ ಅವರ ತೋಟದ(ನಡುಗಡ್ಡೆ)ಯಲ್ಲಿ ಸಿಲುಕಿರುವ ಯುವಕ ಮಾಧವಾನಂದ(ನಂದು) ದೊಡಮನಿ(23) ಎಂಬ ಯುವಕನು ದನಗಳಿಗೆ ಮೇವುನ್ನು ಹಾಕಿ ಹೊರವಷ್ಟರಲ್ಲಿ ಪ್ರವಾಹದ ಸುಳಿಗೆ ಸಿಲುಕಿದ್ದಾನೆ.
ಯುವಕನ ರಕ್ಷಣೆಗಾಗಿ ತಂದೆ-ತಾಯಿ ತಹಶೀಲದಾರರ ಮೊರೆ ಹೋಗಿದ್ದರು. ನಿನ್ನೆಯ ದಿನ ಆತನನ್ನು ಹೊರ ತರಲು ಅಯ್ಯುಬ ಖಾನ ಅವರ ತಂಡ ತೆರಳಿದಾಗ ಅಲ್ಲಿಯ ಪ್ರವಾಹದ ಆರ್ಭಟದ ಸೆಳೆವುನ್ನು ಕಂಡು ನಿಸ್ಸಹಾಯಕರಾಗಿ ವಾಪಸ್ಸು ಬಂದಿದ್ದರು. ಗುರುವಾರದಂದು ಆತನನ್ನು ಹೊರ ತರಲು ತಾಲೂಕಾಡಳಿತ ಹೆಲಿಕಾಪ್ಟರ್ ಹಾಗೂ ಯಾಂತ್ರಿಕೃತ ಬೋಟ ಮೂಲಕ ಕರೆ ತರುವ ಏರ್ಪಾಟು ಮಾಡುವಷ್ಟರಲ್ಲಿಯೇ ಯುವಕನು ಪ್ರವಾಹದಲ್ಲಿ ಸುಮಾರು ಒಂದು ಕಿ.ಮೀ ಈಜಿ ದಡ ಸೇರಿದ್ದಾನೆ. ಯುವಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತೀವೃ ನಿಗಾ ಘಟಕದಲ್ಲಿ ದಾಖಲಿಸಿಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.