ಗೋಕಾಕ:ಪ್ರವಾಹದ ಹಾನಿಯ ಮೊತ್ತವನ್ನು ಅಂದಾಜಿಸಲು ಸಾಧ್ಯವಿಲ್ಲ : ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರವಾಹದ ಹಾನಿಯ ಮೊತ್ತವನ್ನು ಅಂದಾಜಿಸಲು ಸಾಧ್ಯವಿಲ್ಲ : ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 9 :
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಶುಕ್ರವಾರ ಸಂಜೆ ಮತ್ತೇ ಸಂತ್ರಸ್ಥರ ನೆರವಿಗೆ ಧಾವಿಸಿದರು. ತಾಲೂಕಿನ ಬೆಟಗೇರಿ, ಬಿಲಕುಂದಿ, ತಪಸಿ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ಥರನ್ನು ಶಾಸಕರು ಭೇಟಿ ಮಾಡಿದ ಶಾಸಕರು ಪರಿಹಾರ ಕೇಂದ್ರದಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮಳೆರಾಯನ ರುದ್ರನರ್ತನಕ್ಕೆ ಸಿಕ್ಕಿರುವ ನಮ್ಮ ಭಾಗದ ಜನರು ಗಾಬರಿಯಾಗಬೇಡಿ. ಹೆಚ್ಚುತ್ತಿರುವ ಸತತ ಮಳೆಯಿಂದಾಗಿ ನಮ್ಮ ತಾಲ್ಲೂಕುಗಳ ನದಿ ತೀರದ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಈಗ ನಾವೆಲ್ಲರೂ ಮಳೆ ನಿಲ್ಲಬೇಕೆಂದು ಆ ವರುಣ ದೇವನಲ್ಲಿ ಪ್ರಾರ್ಥಿಸೋಣ. ಮಳೆ ನಿಂತರೆ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.
ಮಳೆಯ ಅಬ್ಬರದಿಂದಾಗಿ ವಸತಿ ಕಳೆದುಕೊಂಡಿರುವ ಸಂತ್ರಸ್ಥರಿಗೆ ಮನೆ ಕಟ್ಟಿಕೊಡುವ ವ್ಯವಸ್ಥೆ ಮಾಡಲಾಗುವುದು. ಬೆಳೆಗಳ ಹಾನಿ, ರಸ್ತೆಗಳು ಸಂಪೂರ್ಣ ಹಾನಿಯಾಗಿವೆ. ಇಷ್ಟೇ ಮೊತ್ತದ ಹಾನಿಯಾಗಿದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಹಾನಿಯ ಪ್ರಮಾಣ ಹೆಚ್ಚುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಂತ್ರಸ್ಥರಿಗೆ ಎಲ್ಲ ರೀತಿಯ ಪರಿಹಾರ ದೊರಕಿಸಿಕೊಡುವ ಸಂಬಂಧ ಮನವಿ ಮಾಡಿಕೊಳ್ಳುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಸಂತ್ರಸ್ಥರಿಗೆ ಭರವಸೆ ನೀಡಿದರು. ಸಂತ್ರಸ್ಥರು ಶಾಸಕರಿಗೆ ತಮ್ಮ ಅಳಲು ತೋಡಿಕೊಂಡರು.