ಗೋಕಾಕ:ಲೋಳಸೂರ ಸೇತುವೆಯನ್ನು ಎತ್ತರಿಸಲು ಹೋರಾಟ : ಮಾಜಿ ಸಚಿವ ಸತೀಶ
ಲೋಳಸೂರ ಸೇತುವೆಯನ್ನು ಎತ್ತರಿಸಲು ಹೋರಾಟ : ಮಾಜಿ ಸಚಿವ ಸತೀಶ
ನೆರೆ ಪೀಡಿತ ಪ್ರದೇಶಗಳನ್ನು ವಿಕ್ಷೀಸಿ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 14 :
ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹಾಗೂ ಕಾಂಗ್ರೇಸ್ ಮುಖಂಡ ಲಖನ ಜಾರಕಿಹೊಳಿ ಅವರು ಬುಧವಾರದಂದು ಜಂಟಿಯಾಗಿ ನಗರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ವಡ್ಡರ ಗಲ್ಲಿ, ಕುಂಬಾರ ಗಲ್ಲಿ, ಲಕ್ಕಡ ಗಲ್ಲಿ ಉಪ್ಪಾರ ಗಲ್ಲಿ, ಕಲಾಲ ಗಲ್ಲಿ, ಹಾಳಬಾಗ ಗಲ್ಲಿ, ಕಿಲ್ಲಾ ಸೇರಿದಂತೆ ಅನೇಕ ಕಡೆ ಸಂಚರಿಸಿ ನಗರ ಸಭೆ ಹಾಗೂ ಸತೀಶ ಶುಗರ್ಸ್ ಸಿಬ್ಬಂದಿ ವತಿಯಿಂದ ನಡೆಯುತ್ತಿದ್ದ ಸ್ವಚ್ಛತಾ ಕಾರ್ಯವನ್ನು ವಿಕ್ಷೀಸಿ ನಂತರ ಭಗವಾನ ಶೇಡಜಿ ಕೂಟದಲ್ಲಿ ಅಧಿಕಾರಿಗಳನ್ನು ಕರೆಯಿಸಿ ಕಾರ್ಯವೈಖರಿಗಳ ಬಗ್ಗೆ ಮಾಹಿತಿಯನ್ನು ಪಡೆದು ಅಧಿಕಾರಿಗಳು ಮಾಡಬೇಕಾದ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ನಗರದಲ್ಲಿ ನಡೆಯುತ್ತಿದ್ದ ಸ್ವಚ್ಚತಾ ಕಾರ್ಯವನ್ನು ವಿಕ್ಷಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂತ್ರಸ್ತರಿಗೆ ಧೈರ್ಯವನ್ನು ಹೇಳುತ್ತಾ ಮುನ್ನಡೆದ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಮನೆ ಗೋಡೆಗಳ ಕುಸಿತದಿಂದಾಗಿ ಶೇಖರವಾಗಿರುವ ಮಣ್ಣನ್ನು ತೆಗೆಯಲು ಸತೀಶ ಶುಗರ್ಸ್ ಕಾರ್ಖಾನೆಯಿಂದ ಜೆಸಿಬಿ ಹಾಗೂ ಟ್ಯಾಕ್ಟರ್‍ಗಳನ್ನು ನಗರದ ನೆರೆ ಪೀಡಿತ ಪ್ರದೇಶಗಳಿಗೆ ಒದಗಿಸಿರುವದಾಗಿ ತಿಳಿಸಿದರು.
ಲೋಳಸೂರ ಸೇತುವೆಯನ್ನು ಎತ್ತರಿಸುವರೆಗೂ ಹೋರಾಟ :
ಸತೀಶ ಜಾರಕಿಹೊಳಿ ಅವರು ಲೋಳಸೂರ ಸೇತುವೆ ಬಳಿ ಸಂಕೇಶ್ವರ-ನರಗುಂದ ರಸ್ತೆ ನಿರ್ಮಾಣದ ವೇಳೆಯಲ್ಲಿ ರಸ್ತೆ ಎತ್ತರಿಸುವ ಕ್ರಮ ಅವೈಜ್ಞಾನಿಕವಾಗಿದ್ದರಿಂದ ಘಟಪ್ರಭಾ ನದಿ ನೀರು ನಗರಕ್ಕೆ ದೊಡ್ಡ ಪ್ರಮಾಣದಲ್ಲಿ ನುಗ್ಗುವ ಭೀತಿ ವ್ಯಕ್ತ ಪಡಿಸಿ ಹೋರಾಟದ ಮೂಲಕ 13 ವರ್ಷಗಳ ಹಿಂದೆಯೇ ಎಚ್ಚರಿಕೆಯನ್ನು ನೀಡಿದ್ದರು. ಆ ಹೋರಾಟವನ್ನು ರಾಜಕೀಯ ಪ್ರೇರಿತ ಹೋರಾಟವೆಂದು ಕೆಲವರು ಜರಿದಿದ್ದರು. ಲೊಳಸೂರ ಸೇತೆವೆ ಬಗ್ಗೆ ಮತ್ತೆ ಹೋರಾಟವನ್ನು ಮುಂದುವರೆಸುವಿರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಈಗ ಸದ್ಯ ನಿರಾಶ್ರಿತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆದಿದ್ದು ಪರಿಹಾರ ನೀಡುವ ಕಾರ್ಯ ಮುಗಿದು ನಂತರ ಇಲ್ಲಿಯ ಜನತೆಯ ಅಭಿಪ್ರಾಯವನ್ನು ಪಡೆದು ಲೋಳಸೂರ ಸೇತುವೆಯನ್ನು ಎತ್ತರಿಸುವರೆಗೂ ನಮ್ಮ ಹೋರಾಟ ನಿರಂತರವಾಗಿ ಮುನ್ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಿಯಾಜ ಚೌಗಲಾ, ಶಿವು ಪಾಟೀಲ, ಪಾಂಡು ಮನ್ನಿಕೇರಿ ವಿವೇಕ ಜತ್ತಿ, ಆರೀಪ ಪೀರಜಾದೆ, ಸದಾನಂದ ಕಲಾಲ,ವಿನಾಯಕ ಚಿಪ್ಪಲಕಟ್ಟಿ ,ಅಶೋಕ ರಾಠೋಡ, ವಿನೋದ ಡೊಂಗರೆ, ನಗರ ಸಭೆ ಸದಸ್ಯ ಭಗವಂತ ಹುಳ್ಳಿ, ಅಬ್ದುಲ್ ತೇರದಾಳ ಸೇರಿದಂತೆ ಅನೇಕರು ಇದ್ದರು.