ಗೋಕಾಕ:ಪ್ರವಾಹ ಪೀಡಿತ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಿ: ಸರಕಾರಕ್ಕೆ ಮಾಜಿ ಸಿ.ಎಂ ಸಿದ್ದರಾಮಯ್ಯ ಒತ್ತಾಯ
ಪ್ರವಾಹ ಪೀಡಿತ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಿ: ಸರಕಾರಕ್ಕೆ ಮಾಜಿ ಸಿ.ಎಂ ಸಿದ್ದರಾಮಯ್ಯ ಒತ್ತಾಯ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 28 :
ಪ್ರವಾಹ ಪೀಡಿತ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಿ.ಎಂ ಸಿದ್ದರಾಮಯ್ಯ ಸರಕಾರವನ್ನು ಆಗ್ರಹಿಸಿದರು
ಬುಧವಾರದಂದು ನಗರದ ನೆರೆ ಹಾವಳಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲನ್ನು ಸ್ವೀಕರಿಸಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಹಿಂದೆಂದು ಕಂಡು ಕಾಣದ ಮಹಾ ಪ್ರವಾಹಕ್ಕೆ ಸಿಲುಕಿ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಸರಕಾರ ಕೂಡಲೇ ಇವರ ನೆರವಿಗೆ ಧಾವಿಸಿ ಇವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಮುಂದಾಗಬೇಕಾಗಿದೆ.
ಕೇವಲ ಗಂಜಿ ಕೇಂದ್ರಗಳಿಂದ ತೆರೆದು ಸಂತ್ರಸ್ತರಿಗೆ ಊಟ ನೀಡಿದರೆ ಸಾಲದು, ಸಂತ್ರಸ್ತರ ಬದುಕನ್ನು ಕಟ್ಟಲು ತಾತ್ಕಾಲಿಕ ನೀಡುತ್ತಿರುವ 10 ಸಾವಿರ ರೂ ಪರಿಹಾರ ಧನವನ್ನು ಮನೆ ಮಾಲೀಕರ ಜೊತೆ ಬಾಡಿಗೆದಾರರಿಗೂ ಪರಿಗಣಿಸಿ ತಕ್ಷಣದಲ್ಲೇ ಪರಿಹಾರ ನೀಡುವಂತೆ ಸರಕಾರವನ್ನು ಒತ್ತಾಯಿಸಿದ ಸಿದ್ದರಾಮಯ್ಯನವರು ತಾತ್ಕಾಲಿಕ ಪರಿಹಾರಧನವನ್ನು 25 ಸಾವಿರಕ್ಕೆ ಏರಿಸಿ ಮನೆಗಳನ್ನು ನಿರ್ಮಿಸಲು ನೀಡುತ್ತಿರುವ 5 ಲಕ್ಷ ರೂ ಪರಿಹಾರವನ್ನು 10 ಲಕ್ಷಕ್ಕೆ ಏರಿಸಬೇಕೆಂದು ಆಗ್ರಹಿಸಿದರಲ್ಲದೇ ಪ್ರವಾಹ ಪೀಡಿತ ಪ್ರದೇಶಗಳನ್ನು ವಿಕ್ಷೀಸುತ್ತಿರುವಾಗ ಸಂತ್ರಸ್ತರ ಅಹವಾಲನ್ನು ಆಲಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರ ಒತ್ತಡಕ್ಕೆ ಒಳಗಾಗದೆ ನಿಜವಾದ ಸಂತ್ರಸ್ತರನ್ನು ಗುರುತಿಸಿ ತಕ್ಷಣದಲ್ಲೆ ಪರಿಹಾರ ಧನದ ಮೊತ್ತ, ಮನೆ ಬಾಡಿಗೆ ಸಹಾಯ ಧನ.ತಾತ್ಕಾಲಿಕ ಶೇಡಗಳನ್ನು ನಿರ್ಮಿಸಲು ಹಣ ನೀಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ ಮತ್ತು ಪೌರಾಯುಕ್ತರಿಗೆ ಸೂಚಿಸಿದರು.
ವಿಶೇಷ ಅಧಿವೇಶನಕ್ಕೆ ಒತ್ತಾಯ: ಪ್ರವಾಹದಿಂದ ಹಾನಿಗೊಳಗಾದ ಉತ್ತರ ಕರ್ನಾಟಕದ ಎಲ್ಲ ಭಾಗಗಳನ್ನು ಸಮೀಕ್ಷೆ ಮಾಡಿ ನಮ್ಮ ಪಕ್ಷದ ಪ್ರಮುಖರು ಸಿದ್ದಪಡಿಸಿರುವ ಹಾನಿಗೊಳಗಾದ ಪ್ರದೇಶಗಳ ವರದಿಯನ್ನು ಆಧರಿಸಿ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಇಂದಿರಾ ಕ್ಯಾಂಟಿನ್ ತನಿಖೆ ಸಿದ್ದ: ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವಿದ್ದಾಗ ಬಡಜನರ ಹಸಿವುನ್ನು ನೀಗಿಸಲು ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಗಿದ್ದು, ಈ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ಯಾವುದೇ ತನಿಖೆಗೆ ಸಿದ್ದವಿರುವುದಾಗಿ ತಿಳಿಸಿದ ಅವರು ಇಂದಿರಾ ಕ್ಯಾಂಟಿನ ಬಂದ ಮಾಡಲು ಪ್ರಯತ್ನಿಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಬಡಜನರ ಹೊಟ್ಟೆಯ ಮೇಲೆ ಹೊಡಿಯಬೇಡಿ ಎಂದು ಖಾರವಾಗಿ ಪ್ರತಿಕ್ರೀಯಿಸಿದರು.
ನಂತರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಾದ ಲೋಳಸೂರ, ಅಡಿಬಟ್ಟಿ, ಮೆಳವಂಕಿ ಕೌಜಲಗಿ ಮಾರ್ಗವಾಗಿ ರಾಮದುರ್ಗ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಮಹಾಂತೇಶ ಕೌಜಲಗಿ, ಪಿರೋಜ ಶೇಠ, ಕಾಂಗ್ರೇಸ್ ಮುಖಂಡರಾದ ಲಖನ ಜಾರಕಿಹೊಳಿ, ಲಕ್ಷ್ಮಣರಾವ ಚಿಂಗಳೆ, ವಿನಯ ನಾವಲಗಟ್ಟಿ , ತಹಶೀಲ್ದಾರ್ ಪ್ರಕಾಶ ಹೋಳಪ್ಪಗೋಳ,ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ಅನೇಕರು ಇದ್ದರು.