ಘಟಪ್ರಭಾ:ತುಕ್ಕಾನಟ್ಟಿ ಗ್ರಾಮದಲ್ಲಿ ಹಾಲಿಗೆ ಕಲಬೆರಿಕೆ : ಪೊಲೀಸರ ದಾಳಿ ಓರ್ವನ ಬಂಧನ
ತುಕ್ಕಾನಟ್ಟಿ ಗ್ರಾಮದಲ್ಲಿ ಹಾಲಿಗೆ ಕಲಬೆರಿಕೆ : ಪೊಲೀಸರ ದಾಳಿ ಓರ್ವನ ಬಂಧನ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಸೆ 1 :
ಸಮೀಪದ ತುಕ್ಕಾನಟ್ಟಿ ಗ್ರಾಮದಲ್ಲಿ ಹಾಲಿಗೆ ಕಲಬೆರಿಕೆ ಸಾಮಗ್ರಿಗಳನ್ನು ಸೇರಿಸಿ ಮಾರುತ್ತಿದ್ದ ಕೇಂದ್ರದ ಮೇಲೆ ಆಹಾರ ತಪಾಸಣಾ ಅಧಿಕಾರಿ ಹಾಗೂ ಘಟಪ್ರಭಾ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಿ ಕಲಬೆರಿಕೆ ಸಾಮಾಗ್ರಿಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಗ್ರಾಮದ ಕರಿಸಿದ್ದೇಶ್ವರ ಎನ್ನುವ ಹಾಲು ಉತ್ಪಾದಕರ ಸಂಘದ ಡೇರಿಯಲ್ಲಿ ರೈತರಿಂದ ಸಂಗ್ರಹಿಸಿದ ಹಾಲಿಗೆ ನಂತರ ಕಲಬೆರಕೆ ಮಿಶ್ರಣ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಘಟಪ್ರಭಾ ಪಿಎಸ್‍ಐ ರಮೇಶ ಪಾಟೀಲ ಹಾಗೂ ಸಿಬ್ಬಂದಿ ಮತ್ತು ಗೋಕಾಕ ಆಹಾರ ಇಲಾಖೆಯ ಅಧಿಕಾರಿಯಾಗಿರುವ ಲೋಕೇಶ ದಾನೂರ ದಾಳಿ ಮಾಡಿ ಹಾಲಿನ ಡೇರಿ ಮಾಲಿಕ ಸತೀಶ ವಿಠ್ಠಲ ದುರದುಂಡಿ (26) ಎಂಬುವವನ್ನು ಬಂಧಿಸಿ ಗೋಕಾಕ ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.
ಅರೋಪಿಯಿಂದ 23 ಚೀಲ ಕಲಬೆರಕೆ ಹಾಲಿನ ಪೌಡರ ಹಾಗೂ 6 ಡಬ್ಬಿ ಫಾರ್ಮೋಲಿನ್ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ. ಆತ ಕಲಬೆರಕೆ ಹಾಲಿನ ಪೌಡರ ಹಾಗೂ ಫಾರ್ಮೋಲಿನ್ ಎಣ್ಣೆಯನ್ನು ಸೇರಿಸಿ ಮಿಕ್ಸಿಯಲ್ಲಿ ಗ್ರ್ಯಾಡಿಂಗ್ ಮಾಡಿ ನಂತರ ರೈತರು ನೀಡಿದ ಹಾಲಿಗೆ ಹಾಕುತ್ತಿದ್ದ. ಇದರಿಂದ ಹಾಲಿನಲ್ಲಿ ಪ್ಯಾಟ್ ಹೆಚ್ಚಾಗಿ ಹೆಚ್ಚು ಆದಾಯ ಬರುತ್ತದೆ ಎಂದು ತಿಳಿದುಬಂದಿದೆ. ನಂತರ ಆತ ಇದೇ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡಿ ಉಳಿದ ಹಾಲನ್ನು ಬೇರೆ ಕೇಂದ್ರಕ್ಕೆ ಕಳುಹಿಸುತ್ತಿದ್ದನೆಂದು ತಿಳಿದು ಬಂದಿದೆ.
ಈ ರೀತಿ ಕಲಬೆರಕೆ ಹಾಲು ಮಿಶ್ರಣ ಜಾಲ ಹಲವಾರು ಕಡೆ ಗೌಪ್ಯವಾಗಿ ನಡೆಯುತ್ತಿದ್ದು, ಕಳೆದ ವರ್ಷ ಜಿಲ್ಲೆಯ ಬೇರೆ ತಾಲೂಕಿನಲ್ಲೂ ಪತ್ತೆಯಾಗಿತ್ತು. ಈಗ ಕೆಎಂಎಫ್ ನೂತನ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ನಮ್ಮ ಜಿಲ್ಲೆಯವರಾಗಿರುವುದರಿಂದ ಕಲಬೆರಿಕೆ ತಡೆಗಟ್ಟುವ ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.