ಗೋಕಾಕ : ಎಸಿಬಿ ದಾಳಿ ಸರ್ವೆಯರ ಮೇಟಿ ಬಂಧನ
ಗೋಕಾಕದಲ್ಲಿ ಎಸಿಬಿ ದಾಳಿ : ಸರ್ವೆಯರ ಮೇಟಿ ಬಂಧನ
ಗೋಕಾಕ ಜು 20: ಜಮೀನು ಪೋಡಿ ಮಾಡಲು ಲಂಚ ಸ್ವೀಕರಿಸುತ್ತಿದ್ದ ಸರ್ವೆಯರನೊಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ಜರುಗಿದೆ.
ಇಲ್ಲಿಯ ಸರ್ವೆಯರ ಕಾರ್ಯಾಲಯದಲ್ಲಿ ಕೆಲಸ ಮಾಡುವ ಸರ್ವೆಯರ ಅರವಿಂದ ಬಸವರಾಜ ಮೇಟಿ ತಾಲೂಕಿನ ನಂದಗಾಂವ ಗ್ರಾಮದ ರೈತ ವೀರಭದ್ರ ನಾಗಪ್ಪ ಹತ್ತರಕಿ ಎಂಬವನಿಂದ ಜಮೀನು ಪೋಡಿ ಮಾಡಲು 1500ರೂ. ಸ್ವೀಕರಿಸುತ್ತಿದ್ದಾಗ ಗುರುವಾರದಂದು ಖಾಸಗಿ ಹೋಟೇಲ್‍ದಲ್ಲಿ ಎಸಿಬಿ ಅಧಿಕಾರಿಗಳು ಬಲೆ ಬೀಸಿ ಹಿಡಿದಿದ್ದಾರೆ.
ನಂದಗಾಂವ ಗ್ರಾಮದ ಸರ್ವೆ ನಂ 93 ರ ಜಮೀನನ್ನು ಪೋಡಿ ಮಾಡಿಕೊಡಲು ಸರ್ವೆಯರ ಅರವಿಂದ ಮೇಟಿ ರೈತ ವೀರಭದ್ರ ಹತ್ತರಕಿ ಈತನ ಬಳಿ 3000ರೂ. ಲಂಚ ಬೇಡಿಕೆ ಇಟ್ಟಿದ್ದನು, ಆಗ ಒಂದು ಸಾವಿರ ರೂ. ಮುಂಗಡವಾಗಿ ರೈತನು ನೀಡಿದ್ದನು. ಇನ್ನುಳಿದ ಹಣ ನೀಡುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಎಸಿಬಿ ಡಿವೈಎಸ್‍ಪಿ ಜೆ. ರಘು ಅವರ ಮಾರ್ಗದರ್ಶನದಲ್ಲಿ ಸಿಪಿಐಗಳಾದ ವಿಶ್ವನಾಥ ಕಬ್ಬೂರ, ಧರೀನಾಯ್ಕ ಹಾಗೂ ಎಸಿಬಿ ಸಿಬ್ಬಂದಿ ಧಾಳಿ ನಡೆಸಿ, ಸರ್ವೆಯರ ಅರವಿಂದ ಮೇಟಿಯನ್ನು ಬಂಧಿಸಿದ್ದಾರೆ.