ಗೋಕಾಕ:ಶಾಲಾ ಮಕ್ಕಳ ಕಲಿಕಾ ಶಿಕ್ಷಣದ ಗುಣಮಟ್ಟ ಪರಿಶೀಲಿಸಿದ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ
ಶಾಲಾ ಮಕ್ಕಳ ಕಲಿಕಾ ಶಿಕ್ಷಣದ ಗುಣಮಟ್ಟ ಪರಿಶೀಲಿಸಿದ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಸೆ 14 :
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ ಮಕ್ಕಳು ಎಷ್ಟು ಓದಿದರೂ ಕಡಿಮೆಯೇ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಶಾಲಾ ಮಕ್ಕಳು ಪಾಲ್ಗೊಂಡು ತಮ್ಮಲ್ಲಿರುವ ಸೂಪ್ತ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಮೂಡಲಗಿ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪತ್ರೇಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಶನಿವಾರ ಸೆ.14 ರಂದು ಆಕಸ್ಮಿಕ ಭೇಟಿ ನೀಡಿ, ಶಾಲೆಯ ಮಕ್ಕಳ ಕಲಿಕಾ ಶಿಕ್ಷಣದ ಗುಣಮಟ್ಟ ಪರಿಶೀಲಿಸಿ ಮಾತನಾಡಿದ ಅವರು, ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು.
ಈ ವೇಳೆ ಶಾಲೆಯ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಿಇಒ ಅಜೀತ ಮನ್ನಿಕೇರಿ ಅವರ ಜೋತೆ ಶಾಲೆಯ ಶಿಕ್ಷಕರು ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳ ಕುರಿತು ಚರ್ಚಿಸಿದರು.
ಬೆಟಗೇರಿ ವಲಯ ಸಿಆರ್‍ಪಿ ಬಿ.ಟಿ.ಪುಂಜಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ರಾಮ ಲೋಕನ್ನವರ, ಮುಖ್ಯಶಿಕ್ಷಕ ಬಿ.ಎ.ಕೋಟಿ, ಎಚ್.ವೈ.ಕಟ್ಟಿಮನಿ, ಎಸ್.ಜಿ.ಮಠಪತಿ ಸೇರಿದಂತೆ ಶಿಕ್ಷಕರು, ಬಿಸಿಯೂಟ ಅಡುಗೆ ಸಿಬ್ಬಂದಿ, ಅಂಗನವಾಡಿ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.