RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ

ಗೋಕಾಕ:ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ 

ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 16 :

 

 

ಪ್ರವಾಹದಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಹೆಚ್ಚಿನ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಭಾರತಿ ಶೆಟ್ಟಿ ಹೇಳಿದರು.
ಸೋಮವಾರ ಸಂಜೆ ನೆರೆ ಪೀಡಿತ ಗ್ರಾಮಗಳಾದ ಚಿಗಡೊಳ್ಳಿ ಮತ್ತು ಮೆಳವಂಕಿ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ಥರನ್ನು ಸಂತೈಸಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂತ್ರಸ್ಥರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಎನ್‍ಡಿಆರ್‍ಎಫ್‍ನಿಂದ ಪ್ರತಿ ಹೆಕ್ಟರ್‍ಗೆ 13500 ರೂ.ಗಳನ್ನು ಪರಿಹಾರ ರೂಪದಲ್ಲಿ ರೈತರ ಬೆಳೆಗಳಿಗೆ ನೀಡಲಾಗುತ್ತಿದ್ದು, ಇದನ್ನು ಸಂತ್ರಸ್ಥರ ಮನವಿ ಮೇರೆಗೆ 50 ಸಾವಿರ ರೂ.ಗಳವರೆಗೆ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಅದರಂತೆ 2 ಹೆಕ್ಟರದಿಂದ ಐದಾರು ಹೆಕ್ಟರವರೆಗೆ ಪರಿಹಾರವನ್ನು ಹೆಚ್ಚಳ ಮಾಡಿ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುವಂತೆ ಸಿಎಂ ಯಡಿಯೂರಪ್ಪ ಅವರಲ್ಲಿ ಕೋರುವುದಾಗಿ ಅವರು ಹೇಳಿದರು.
ಕಳೆದ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಈ ಭಾಗ ತತ್ತರಿಸಿ ಹೋಗಿದೆ. ನಮಗೆಲ್ಲ ಸಂತ್ರಸ್ಥರ ಸ್ಥಿತಿ ಕಂಡು ನೋವಾಗಿದೆ. ಯಾರೂ ಈ ಘಟನೆಯಿಂದ ನೊಂದುಕೊಳ್ಳಬಾರದು. ನಿಮ್ಮೊಂದಿಗೆ ನಾವಿದ್ದೇವೆ. ನಮ್ಮ ಸರ್ಕಾರವಿದೆ. ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂತ್ರಸ್ಥರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಹೆದರಬೇಡಿ. ದೇವರು ಸುಂದರವಾದ ಬದುಕನ್ನು ನೀಡಿದ್ದಾನೆ. ಈ ಬದುಕನ್ನು ನಾವೆಲ್ಲರೂ ಸಾರ್ಥಕಪಡಿಸಿಕೊಳ್ಳಬೇಕೆಂದು ಸಂತ್ರಸ್ಥರಿಗೆ ಧೈರ್ಯ ತುಂಬಿದರು.
ಯಡಿಯೂರಪ್ಪನವರು ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಾಕಷ್ಟು ಯೋಜನೆಗಳನ್ನು ಸಾಕಾರಗೊಳಿಸುವ ಮನೋಭಾವನೆ ಅವರಿಗಿದೆ. ಆದರೆ ರಾಜ್ಯದ ಕೆಲ ಭಾಗಗಳಲ್ಲಿ ಪ್ರಕೃತಿ ವಿಕೋಪ ಉಂಟಾಗಿದ್ದರಿಂದ ಈ ಸಮಸ್ಯೆ ಪರಿಹಾರಕ್ಕೆ ಮೊದಲ ಆಧ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.
ಡೋಂಗಿ ಸಿದ್ಧರಾಮಯ್ಯ : ಮಾಜಿ ಸಿಎಂ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಇವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ಅನ್ನಭಾಗ್ಯ ನೀಡಿದವರು ಪ್ರಧಾನಿ ನರೇಂದ್ರ ಮೋದಿ. ಆದರೆ ಹೆಸರು ಮಾತ್ರ ಸಿದ್ಧರಾಮಯ್ಯ. ಕಪ್ಪು ಕನ್ನಡಕ ಹಾಕಿಕೊಂಡು ಮಾತನಾಡುತ್ತಿರುವ ಸಿದ್ಧರಾಮಯ್ಯನವರಿಗೆ ಸರ್ಕಾರದ ಒಳ್ಳೆಯ ಕೆಲಸಗಳು ಕೂಡ ಕತ್ತಲಿನಂತೆ ಕಾಣುತ್ತಿದೆ. ಸರ್ಕಾರದ ಖಜಾನೆ ಖಾಲಿ ಮಾಡಿ ಹೋಗಿರುವ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಬಿಜೆಪಿ ವಿರುದ್ಧ ಮಾತನಾಡುವ ಯಾವುದೇ ಹಕ್ಕಿಲ್ಲ. ಈ ಹಿಂದೆ ರಾಜ್ಯಕ್ಕೆ ನೆರೆ ಬಂದಾಗ ಕಾಂಗ್ರೇಸ್ ಸರ್ಕಾರ ಆಡಳಿತವಿತ್ತು. ಆವಾಗ ಪ್ರಧಾನಿಯಾಗಿದ್ದ ಡಾ.ಮನಮೋಹನಸಿಂಗ್ ಅವರು ರಾಜ್ಯಕ್ಕೆ ಎಷ್ಟು ಪರಿಹಾರ ನೀಡಿದ್ದಾರೆ ಎಂಬುದನ್ನು ಇದೇ ಸಿದ್ಧರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದರು.
ದೇಶಕ್ಕೊಬ್ಬನೇ ಮೋದಿ : ಮೋದಿ ಅವರಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ದೇಶಕ್ಕೆ ಹೆಮ್ಮೆಯಾಗಿದೆ. ಇಂತಹ ಪ್ರಧಾನಿಯನ್ನು ನಾವೆಂದೂ ಕಂಡಿರಲಿಲ್ಲ. ಜನಸೇವೆಯೇ ಅವರ ಪ್ರಮುಖ ಸೇವೆಯಾಗಿದೆ. ದೇಶದ ಜನರನ್ನು ತನ್ನ ಕುಟುಂಬ ಎಂದು ಅರಿತು ಪ್ರಧಾನಿಗಳು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹಣದ ಮೇಲೆ ಯಾವುದೇ ವ್ಯಾಮೋಹ ಇಲ್ಲ. ಸಿದ್ಧರಾಮಯ್ಯ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ ಅವರಂತಹ ಅನೇಕ ರಾಜಕಾರಣಿಗಳು ಸ್ವಿಸ್ ಬ್ಯಾಂಕ್‍ನಲ್ಲಿ ಅಕ್ರಮ ಹಣ ಇಟ್ಟಿದ್ದಾರೆಂದು ದೂರಿದರು.

ಆಪದ್ಭಾಂದವ ಬಾಲಚಂದ್ರ ಜಾರಕಿಹೊಳಿ : ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ನೆರೆ ಪೀಡಿತ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಪದ್ಭಾಂದವರಂತೆ ಕೆಲಸ ನಿರ್ವಹಿಸಿದ್ದಾರೆ. ಕಷ್ಟದಿಂದ ಜನರನ್ನು ಪಾರು ಮಾಡಿದ್ದಾರೆ. ಪ್ರವಾಹಕ್ಕೂ ಮುನ್ನ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮುಂಚಿತವಾಗಿಯೇ ಜನರನ್ನು ರಕ್ಷಿಸುವ ಕೆಲಸ ನಿರ್ವಹಿಸಿರುವುದು ಶ್ಲಾಘನೀಯ. ಇಂತಹ ಜನಾನುರಾಗಿ ಹಾಗೂ ಆಪ್ತರಕ್ಷಕರಂತಹ ಶಾಸಕರು ಸಿಕ್ಕಿದ್ದು ಈ ಭಾಗದ ಜನರ ಸುದೈವ ಎಂದು ಭಾರತಿ ಶೆಟ್ಟಿ ಹೇಳಿದರು.
ಸ್ವತಃ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸ ಹಾಗೂ ಗೃಹ ಕಛೇರಿ ಜಲಾವೃತಗೊಂಡರೂ ಇದಾವುದನ್ನೂ ಲೆಕ್ಕಿಸದೇ ಸಂತ್ರಸ್ಥರನ್ನು ಸಂರಕ್ಷಿಸುವ ಕೆಲಸದಲ್ಲಿ ಹಗಲಿರುಳು ಶ್ರಮಿಸಿರುವ ಕಾರ್ಯ ಶ್ಲಾಘನೀಯವಾದದ್ದು. ಸಂತ್ರಸ್ಥರ ತಾತ್ಕಾಲಿಕ ಪರಿಹಾರ 3800 ರೂ.ಗಳಿಂದ 10 ಸಾವಿರ ರೂ.ಗಳಿಗೆ ಏರಿಸುವುದರಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಪಾತ್ರ ಬಹುದೊಡ್ಡದಿದೆ. ಜಾರಕಿಹೊಳಿ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 10 ಸಾವಿರ ರೂ. ಪರಿಹಾರ ನೀಡುತ್ತಿದ್ದಾರೆ. ಜೊತೆಗೆ ಮನೆಗಳನ್ನು ಕಳೆದುಕೊಂಡವರಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿದ್ದಾರೆ. ಸಂತ್ರಸ್ಥರ ನೆರವಿಗೆ ಧಾವಿಸಿ ಅವರ ಕಷ್ಟಗಳಿಗೆ ಸ್ಪಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಭಾರತಿ ಶೆಟ್ಟಿ ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯ ಗೋವಿಂದ ಕೊಪ್ಪದ, ಯುವ ಧುರೀಣ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರೇಮಾ ಭಂಡಾರಿ, ಅರಭಾವಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಲೋಚನಾ ಮರ್ದಿ, ಸರಸ್ವತಿ ಪೂಜೇರಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ಅಲ್ಲಪ್ಪ ಕಂಕಣವಾಡಿ, ರಾಮಣ್ಣಾ ಕಾಪಸಿ, ಸತ್ತೆಪ್ಪ ಬಬಲಿ, ಯಲ್ಲಪ್ಪ ಬಿ.ಗೌಡರ, ಬಾಳಪ್ಪ ಬಿ.ಗೌಡರ, ಮಾರುತಿ ನಾಯಿಕ, ಲಕ್ಷ್ಮೀ ಮಾಳೇದ, ಮಂಗಲಾ ಕೌಜಲಗಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: