ಘಟಪ್ರಭಾ:ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳಿ: ಹಿರಿಯ ಪತ್ರಕರ್ತ ಬಸವರಾಜ ಹುದ್ದಾರ ಸಲಹೆ
ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳಿ: ಹಿರಿಯ ಪತ್ರಕರ್ತ ಬಸವರಾಜ ಹುದ್ದಾರ ಸಲಹೆ
ಘಟಪ್ರಭಾ ಜು 21 : ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಬಸವರಾಜ ಹುದ್ದಾರ ಹೇಳಿದರು.
ಅವರು ಶನಿವಾರದಂದು ಕಾರ್ಯನಿರತ ಪತ್ರಕರ್ತರ ಸಂಘ (ರಿ) ಘಟಪ್ರಭಾ ಹಾಗೂ ಮದುಕರ ದೇಶಪಾಂಡೆ ಇನಾಮದಾರ ಸರ್ಕಾರಿ ಪ್ರೌಡ ಶಾಲೆ ಮಲ್ಲಾಪೂರ ಪಿ.ಜಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತ, ಇಂದಿನ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಅವಶ್ಯಕವಾಗಿದ್ದು, ದಿನ ನಿತ್ಯ ಪತ್ರಿಕೆಗಳನ್ನು ಓದುವುದರಿಂದ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ರಜಪೂತ ಮಾತನಾಡಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಿಕಾ ರಂಗ ಮಾಡುತ್ತಿದ್ದು ಆದರೆ ಗ್ರಾಮೀಣ ಪತ್ರಕರ್ತರಿಗೆ ಸರ್ಕಾರದಿಂದ ಯಾವುದೇ ಸಹಾಯ, ಸವಲತ್ತು, ರಕ್ಷಣೆ ಇಲ್ಲದಂತಾಗಿದೆ, ಅರಣ್ಯ ಪ್ರದೇಶಗಳ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಾಗಿ, ಮಳೆ ಬೆಳೆ ಇಲ್ಲದೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಮನೆಯ ಮುಂದೆ ಒಂದು ಸಸಿಯನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.
ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾದ್ಯಾಯ ಬಿ.ಬಿ. ನಾಯಿಕ ವಹಿಸಿ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲರ ಹೊಣೆಯಾಗಿದೆ. ಪತ್ರಕರ್ತರು ಪತ್ರಿಕಾ ದಿನಾಚರಣೆಯ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.
ಸ್ಥಳೀಯ ಹೊಸಮಠದ ಶ್ರೀ ವಿರುಪಾಕ್ಷ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ, ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ಮಹತ್ವದಾಗಿದೆ. ನಾವು ಅನ್ನ, ನೀರು ಇಲ್ಲದೆ ಬದುಕಲು ಸಾಧ್ಯ, ಆದರೆ ಶುದ್ಧ ಗಾಳಿ ಇಲ್ಲದೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಪತ್ರಿಯೊಬ್ಬರು ತಮ್ಮ ಸುತ್ತ ಮುತ್ತ ಪರಿಸರದಲ್ಲಿ ಗಿಡ ಮರಗಳನ್ನು ಬೆಳಸಬೇಕು ಎಂದು ಹೇಳಿದರು.
ಪ್ರಾರಂಭದಲ್ಲಿ ಶಾಲೆಯ ಆವರಣದಲ್ಲಿ ಗೋಕಾಕ ವಲಯ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗಣ್ಯರಿಂದ ಸಸಿ ನೆಡುವದರ ಮೂಲಕ ವನ ಮಹೋತ್ಸವ ಆಚರಿಸಲಾಯಿತು.
ವೇದಿಕೆ ಮೇಲೆ ಎಸ.ಡಿ.ಎಂ.ಸಿ ಅಧ್ಯಕ್ಷ ಮಲ್ಲೇಶ ಕೋಳಿ, ಹಿರಿಯ ಪತ್ರಕರ್ತ ಎಂ.ಬಿ.ಭಜಂತ್ರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ದಿಲಾವರ ಬಾಳೇಕುಂದದ್ರಿ, ಪ್ರಧಾನ ಕಾರ್ಯದರ್ಶಿ ಸಲೀಮ ಕಬ್ಬೂರ, ನಿರ್ದೇಶಕರಾದ ವಿಠ್ಠಲ ಕರೋಶಿ, ಆರ್,ಆರ್.ಕರೆಪ್ಪಗೋಳ, ಚಂದ್ರು ದೊಡಮನಿ, ಅಲ್ಲಾಭಕ್ಷ ಜಮಾದಾರ, ಸ್ಥಳೀಯ ಪತ್ರಕರ್ತ ರಮೇಶ ಜಿರಲಿ, ನಾಗರಾಜ ಚಚಡಿ, ಅಪ್ಪಾಸಾಬ ಮುಲ್ಲಾ, ಕರ್ನಾಟಕ ಯುವ ಸೇನೆ ಜಿಲ್ಲಾಧ್ಯಕ್ಷ ಈರಣ್ಣಾ ಸಂಗಮನವರ, ಮಾರುತಿ ಶಿಂಗಾರಿ, ರಾಜಶೇಖರ ರಜಪೂತ, ಆದಪ್ಪಾ ಮಗದುಮ್, ಪರಶುರಾಮ ಗೋಕಾಕ, ಫಾರುಕ ಅತ್ತಾರ, ಸಾಗರ ಶಿಂದೆ, ಶಾನೂರ ಡಾಂಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಬಿ.ಕೆ.ಶಿರಗಾವಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.