RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಬರೆದಂತೆ ಬದುಕಿದ ಧೀಮಂತ ಸಾಹಿತಿ ಬಸವರಾಜ ಕಟ್ಟೀಮನಿ ; ಡಾ. ಬಸವರಾಜ ಸಾದರ

ಮೂಡಲಗಿ:ಬರೆದಂತೆ ಬದುಕಿದ ಧೀಮಂತ ಸಾಹಿತಿ ಬಸವರಾಜ ಕಟ್ಟೀಮನಿ ; ಡಾ. ಬಸವರಾಜ ಸಾದರ 

ಬರೆದಂತೆ ಬದುಕಿದ ಧೀಮಂತ ಸಾಹಿತಿ ಬಸವರಾಜ ಕಟ್ಟೀಮನಿ ; ಡಾ. ಬಸವರಾಜ ಸಾದರ

 

 
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಸೆ 26 :

 

 

ಬಸವರಾಜ ಕಟ್ಟೀಮನಿ ಅವರು ತಾವು ಬರೆದಂತೆ ಬದುಕಿದ ಧೀಮಂತ ಸಾಹಿತಿ ಎಂದು ಸಾಹಿತಿ, ಚಿಂತಕ ಡಾ. ಬಸವರಾಜ ಸಾದರ ಹೇಳಿದರು.
ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಆತಿಥ್ಯದಲ್ಲಿ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಗುರವಾರ ಆಯೋಜಿಸಿದ ‘ಕಟ್ಟೀಮನಿ ಸಾಹಿತ್ಯ :ಮರು ಚಿಂತನೆ’ಯ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ
ಅವರು ಬದುಕನ್ನು ಪ್ರೀತಿಸದಿರುವ ಕಲೆಯಾಗಲಿ ಮತ್ತು ಸಾಹಿತ್ಯದಿಂದ ಯಾವ ಪ್ರಯೋಜನವಿಲ್ಲ ಎಂದು ಕಟ್ಟೀಮನಿ ಅವರು ಪ್ರತಿಪಾದಿಸಿದ್ದರು ಎಂದರು.
ಕಟ್ಟೀಮನಿ ಅವರು ಬಂಡಾಯ ಸಾಹಿತ್ಯ ಪರಂಪರೆಗೆ ಹೊಸ ಮೆರಗು ನೀಡಿದ್ದು, ಅವರ ಒಟ್ಟು 64 ಕೃತಿಗಳು ಮತ್ತು ಅವುಗಳ ವೈಶಿಷ್ಟ್ಯಪೂರ್ಣವಾದ ಶೀರ್ಷೆಕೆಗಳು ಸಮಾಜದ ದುಷ್ಟ ವ್ಯವಸ್ಥೆಗೆ ಕನ್ನಡಿಯಾಗಿದ್ದವು ಎಂದರು.
ಕಟ್ಟೀಮನಿ ಅವರ ಸಾಹಿತ್ಯದ ಮರು ಓದು, ಚಿಂತನೆಯು ಪ್ರಸ್ತುತ ಸಮಾಜ ವ್ಯವಸ್ಥೆ ಮತ್ತು ಸಾಹಿತ್ಯಕವಾಗಿ ಇಂದು ಮೌಲಿಕವಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ ಕಟ್ಟೀಮನಿ ಸಾಹಿತ್ಯವನ್ನು ವಿದ್ಯಾರ್ಥಿಗಳು, ಯುವ ಪೀಳಿಗೆಯು ಓದುವ ಮೂಲಕ ವೈಚಾರಿಕತೆಯನ್ನು ಬೆಳೆಸಿಕೊಳ್ಳುವುದು ಅವಶ್ಯವಿದೆ. ಪ್ರತಿಷ್ಠಾನದಿಂದ ನಾಡಿನ ವಿವಿಧೆಡೆ ಕಟ್ಟೀಮನಿ ಸಾಹಿತ್ಯ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮುಂದಿನ ವರ್ಷ ಇದೇ ಕಾಲೇಜುದಲ್ಲಿ ಸ್ವತ: ವಿದ್ಯಾರ್ಥಿಗಳೇ ಕಟ್ಟೀಮನಿ ಕಾದಂಬರಿಗಳನ್ನು ಓದಿ ವಿಚಾರ ಮಂಡಿಸುವುದಾದರೆ ಅಂಥ ಒಂದು ಕಾರ್ಯಕ್ರಮವನ್ನು ಪ್ರತಿಷ್ಠಾನದಿಂದ ಏರ್ಪಡಿಸುವ ಭರವಸೆ ನೀಡಿದರು.
ಸಂಸ್ಥೆಯ ನಿರ್ದೇಶಕ ಎಂ.ಎಚ್. ಸೋನವಾಲಕರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಷ್ಠಾನದ ಸದಸ್ಯ ಸಂಚಾಲಕ ಪ್ರೊ. ಚಂದ್ರಶೇಖರ ಅಕ್ಕಿ ಹಾಗೂ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ, ನಿರ್ದೇಶಕರಾದ ವೆಂಕಟೇಶ ಸೋನವಾಲಕರ, ರವಿ ನಂದಗಾಂವ, ಕಟ್ಟೀಮನಿ ಪ್ರತಿಷ್ಠಾನ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ, ಶಿವಕುಮಾರ ಕಟ್ಟೀಮನಿ, ನ್ಯಾಕ್ ಸಂಯೋಜಕ ಡಾ. ವಿ.ಆರ್. ದೇವರಡ್ಡಿ ವೇದಿಕೆಯಲ್ಲಿದ್ದರು.
ಕಲಾವಿದ ಈಶ್ವರಚಂದ್ರ ಬೆಟಗೇರಿ ಕಟ್ಟೀಮನಿ ಕುರಿತು ಹಾಡಿದ ಲಾವಣಿಯು ಎಲ್ಲರ ಗಮನಸೆಳೆಯಿತು.
ಡಾ. ವಿ,ಆರ್. ದೇವರಡ್ಡಿ ಸ್ವಾಗತಿಸಿದರು, ಬಾಲಶೇಖರ ಬಂದಿ ನಿರೂಪಿಸಿದರು, ಪ್ರೊ. ಎ.ಎಸ್. ಮೀಶಿನಾಯ್ಕ ವಂದಿಸಿದರು.

Related posts: