ಗೋಕಾಕ:ತಮ್ಮ ವೃತ್ತಿಯನ್ನು ತಪಸ್ಸು ಎಂದು ತಿಳಿದು ಅದನ್ನು ಅಭಿಮಾನದಿಂದ ನಿರ್ವಹಿಸಿದರೆ ಜನರ ಮನ್ನಣೆಗಳಿಸಲು ಸಾಧ್ಯ : ಡಾ|| ಎಸ್.ವಿ.ಮುನ್ನಾಳ
ತಮ್ಮ ವೃತ್ತಿಯನ್ನು ತಪಸ್ಸು ಎಂದು ತಿಳಿದು ಅದನ್ನು ಅಭಿಮಾನದಿಂದ ನಿರ್ವಹಿಸಿದರೆ ಜನರ ಮನ್ನಣೆಗಳಿಸಲು ಸಾಧ್ಯ : ಡಾ|| ಎಸ್.ವಿ.ಮುನ್ನಾಳ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 1 :
ತಮ್ಮ ವೃತ್ತಿಯನ್ನು ತಪಸ್ಸು ಎಂದು ತಿಳಿದು ಅದನ್ನು ಅಭಿಮಾನದಿಂದ ನಿರ್ವಹಿಸಿದರೆ ಜನರ ಮನ ಗೆಲ್ಲುವುದರೊಂದಿಗೆ ನೆಮ್ಮದಿಯ ಜೀವನ ಸಾಧ್ಯವೆಂದು ಜಿಲ್ಲಾ ವೈದ್ಯಾಧಿಕಾರಿ ಡಾ|| ಎಸ್.ವಿ.ಮುನ್ನಾಳ ಹೇಳಿದರು.
ಸೋಮವಾರದಂದು ಸಂಜೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕಾ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಯವರು ಹಮ್ಮಿಕೊಂಡ ವಯೋ ನಿವೃತ್ತಿ ಹೊಂದಿದ್ದ ಇಲ್ಲಿಯ ತಾಲೂಕಾ ಆರೋಗ್ಯ ಅಧಿಕಾರಿ ಡಾ|| ಆರ್.ಎಸ್.ಬೆಣಚಿನಮರಡಿ ಅವರು ಬಿಳ್ಕೋಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಎಲ್ಲ ವೃತ್ತಿಗಳಲ್ಲಿ ವೈದ್ಯ ವೃತ್ತಿ ಪವಿತ್ರವಾಗಿದ್ದು, ಎಲ್ಲರೂ ಈ ವೃತ್ತಿಯನ್ನು ಗೌರವಿಸಿ ಅಭಿಮಾನದಿಂದ ಕಾರ್ಯನಿರ್ವಹಿಸಿ ಆರೋಗ್ಯ ಇಲಾಖೆಯ ಘನತೆಯನ್ನು ಹೆಚ್ಚಿಸಿ. ಈ ಆಸ್ಪತ್ರೆ ಮಾದರಿಯಾಗಿ ಕಾರ್ಯನಿರ್ವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ. ಈ ಕಾರ್ಯದಲ್ಲಿ ಡಾ|| ಬೆಣಚಿನಮರಡಿ ಅವರು ಪಾತ್ರ ಮಹತ್ವದಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಿ ಈ ಆಸ್ಪತ್ರೆಯನ್ನು ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಸಬೇಕೆಂದು ಕರೆ ನೀಡಿದ ಅವರು ಡಾ|| ಬೆಣಚಿನಮರಡಿ ಅವರು ನಿವೃತ್ತಿ ಜೀವನ ಸುಖಮಯವಾಗಿ ಇರಲಿ ಎಂದು ಹಾರೈಸಿದರು.
ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಡಾ|| ಆರ್.ಎಸ್.ಬೆಣಚಿನಮರಡಿ ಅವರು ಈ ಆಸ್ಪತ್ರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಇಲ್ಲಿಯ ಜನಪ್ರತಿನಿಧಿಗಳ, ವೈದ್ಯರ ಹಾಗೂ ಸಿಬ್ಬಂದಿಯವರ ಸಹಕಾರವೇ ಕಾರಣ. ನೀವು ನೀಡಿದ ಸಹಕಾರ ಹಾಗೂ ಹೃದಯಸ್ಪರ್ಶಿ ಸನ್ಮಾನ ನನ್ನ ಜೀವಿತಾವಧಿಯಲ್ಲಿ ಸದಾ ಅವಿಸ್ಮರಣಿಯವಾಗಿ ಅಚ್ಚಳಿಯದೆ ಉಳಿಯುತ್ತದೆ ಎಂದು ಭಾವುಕರಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಯೋ ನಿವೃತ್ತರಾದ ಸಹಾಯಕ ಆಡಳಿತಾಧಿಕಾರಿ ಎಸ್.ಎ.ಕಾಡನ್ನವರ ಅವರನ್ನು ಸತ್ಕರಿಸಿ ಬಿಳ್ಕೋಡಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ|| ಅಪ್ಪಾಸಾಹೇಬ ನರಟ್ಟಿ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ|| ಆಯ್.ಪಿ.ಗಡಾದ, ತಾಲೂಕಾ ಆರೋಗ್ಯ ಅಧಿಕಾರಿ ರವೀಂದ್ರ ಆಂಟಿನ್ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ|| ಅಶೋಕ ಮುರಗೋಡ, ನಿವೃತ್ತ ಆರೋಗ್ಯ ಅಧಿಕಾರಿ ಡಾ|| ಬಿ.ಎಸ್.ಮದಭಾಂವಿ ಹಾಗೂ ವೈದ್ಯರು, ಸಿಬ್ಬಂದಿಯವರು ಉಪಸ್ಥಿತರಿದ್ದು ಡಾ|| ಆರ್.ಎಸ್.ಬೆಣಚಿನಮರಡಿ ಅವರನ್ನು ಸತ್ಕರಿಸಿದರು.