ಮೂಡಲಗಿ:ನಾಗನೂರ ಪಟ್ಟಣದ ಅಭಿವೃದ್ಧಿಗಾಗಿ 3.87 ಕೋಟಿ ರೂ. ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ನಾಗನೂರ ಪಟ್ಟಣದ ಅಭಿವೃದ್ಧಿಗಾಗಿ 3.87 ಕೋಟಿ ರೂ. ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ನ 6 :
ನಾಗನೂರ ಪಟ್ಟಣದ ಅಭಿವೃದ್ಧಿಗೆ 3.87 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ತ್ವರೀತಗತಿಯಲ್ಲಿ ಕೈಗೊಳ್ಳುವಂತೆ ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇತ್ತೀಚೆಗೆ ನಾಗನೂರ ಪಟ್ಟಣದಲ್ಲಿ 2019-20ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿಯ 37.47 ಲಕ್ಷ ರೂ. ವೆಚ್ಚದ ಕಾಮಗಾರಿಗಳು, 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದ 1.75 ಕೋಟಿ ರೂ. ವೆಚ್ಚದ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ 1.75 ಕೋಟಿ ರೂ. ವೆಚ್ಚದ ನಾಗನೂರ ಹಳ್ಳಕ್ಕೆ ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾಗನೂರ ಪಟ್ಟಣದ ಪ್ರಗತಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈಗ ಮಂಜೂರಾಗಿರುವ ಕಾಮಗಾರಿಗಳಿಂದ ಪಟ್ಟಣ ಮತ್ತಷ್ಟು ಸುಂದರವಾಗಿ ಗೋಚರಿಸುತ್ತದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ, ಶೌಚಾಲಯ ನಿರ್ಮಾಣ ಕಾಮಗಾರಿಗಳು ನಡೆಯಲಿವೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ ಜನರ ಪ್ರೀತಿ ಗಳಿಸುವಂತೆ ಪಂಚಾಯತ ಸದಸ್ಯರಿಗೆ ಸಲಹೆ ಮಾಡಿದರು.
ದೇವರು, ತಾಯಿ-ತಂದೆ ಮತ್ತು ಜನರ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದದಿಂದ ಸಹಕಾರಿ ರಂಗದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷನಾಗಿ ರೈತರ ಸೇವೆ ಸಲ್ಲಿಸುವ ಅವಕಾಶ ಒದಗಿಬಂದಿದೆ. ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕೆಎಂಎಫ್ ಬಲವರ್ಧನೆಗೆ ವಿನೂತನ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದಾಗಿ ಅವರು ಹೇಳಿದರು.
ಮುಖಂಡರಾದ ಚಂದ್ರು ಬೆಳಗಲಿ, ಕೆಂಚಗೌಡ ಪಾಟೀಲ, ಶಂಕರ ಹೊಸಮನಿ, ಸುಭಾಸ ಬೆಳಗಲಿ, ಪರಸಪ್ಪ ಬಬಲಿ, ಅಲ್ಲಪ್ಪ ಗುಡೆನ್ನವರ, ಬಾಳಗೌಡ ಪಾಟೀಲ, ಮುತ್ತೆಪ್ಪ ಖಾನಪ್ಪಗೋಳ, ಯಲ್ಲಪ್ಪ ಹೊರಟ್ಟಿ, ಸಿದ್ದಪ್ಪ ಯಾದಗೂಡ, ಶಂಕರ ದಳವಾಯಿ, ಭೀಮಗೌಡ ಹೊಸಮನಿ, ಗಜಾನನ ಯರಗಣವಿ, ಬಸವರಾಜ ಹಳಿಗೌಡರ, ಸತ್ತೆಪ್ಪ ಕರವಾಡಿ, ಮಂಗಳಾ ಕೌಜಲಗಿ, ಸಣ್ಣ ನೀರಾವರಿ ಇಲಾಖೆಯ ಜೆಇ ಜೈಭೀಮ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರವಿ ರಂಗಸುಭೆ, ಗುತ್ತಿಗೆದಾರ ಬಸವರಾಜ ಕಸ್ತೂರಿ, ಪಟ್ಟಣ ಪಂಚಾಯತಿ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.