ಗೋಕಾಕ:ಚುನಾವಣೆಗಳಲ್ಲಿ ಜಾರಕಿಹೊಳಿ ಸಹೋದರರಿಂದ ಹಣ ಪಡೆದು ಸೈಲೆಂಟ್ ಆಗಿಲ್ಲ : ದೇವರ ಮೇಲೆ ಪ್ರಮಾಣ ಮಾಡಿದ ಅಶೋಕ
ಚುನಾವಣೆಗಳಲ್ಲಿ ಜಾರಕಿಹೊಳಿ ಸಹೋದರರಿಂದ ಹಣ ಪಡೆದು ಸೈಲೆಂಟ್ ಆಗಿಲ್ಲ : ದೇವರ ಮೇಲೆ ಪ್ರಮಾಣ ಮಾಡಿದ ಅಶೋಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 16 :
ಚುನಾವಣೆಗಳಲ್ಲಿ ಜಾರಕಿಹೊಳಿ ಸಹೋದರರಿಂದ ಹಣ ಪಡೆದು ಸೈಲೆಂಟ್ ಆಗಿಲ್ಲ ಮತ್ತು ಫಾರ್ಟಿ ಫಂಡನಿಂದ ಬಂದ ಹಣವನ್ನು ಸ್ವಂತಕ್ಕೆ ಉಪಯೋಗ ಮಾಡಿಕೊಂಡು ನನ್ನ ಸಾಲವನ್ನು ಪಾವತಿಸಿಲ್ಲ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು
ಶನಿವಾರದಂದು ನಗರದ ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹಿತೈಷಿಗಳ ಮತ್ತು ಬೆಂಬಲಿಗರ ಚಿಂತನ – ಮಂಥನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಮೂರು ಚುನಾವಣೆಯಲ್ಲಿ ಹಿತೈಷಿಗಳು ೮-೧೦ ಲಕ್ಷ ರೂಗಳಂತೆ ನೀಡಿದ್ದನ್ನು ಬಿಟ್ಟರೆ ಉಳಿದ ಹಣವನ್ನು ನನ್ನ ಸ್ವಂತ 31 ಎಕರೆ ಹೊಲ, ೪ ಪ್ಲಾಟಗಳು ಸೇರಿದಂತೆ ಬ್ಯಾಂಕ್‌ಗಳಲ್ಲಿ 1.50 ಕೋಟಿ, ಖಾಸಗಿಯಾಗಿ 2 ಕೋಟಿ ರೂಗಳನ್ನು ಸಾಲ ಮಾಡಿ, ಆಸ್ತಿಗಳನ್ನು ಮಾರಿ, ಬಂಗಾರ ಅಡವಿಟ್ಟು ಚುನಾವಣೆಗೆ ಸ್ವರ್ಧಿಸಿದ್ದೇನೆ, ಹೊರೆತು ಯಾರೊಂದಿಗೂ ಮ್ಯಾಚ್ ಪೀಕ್ಸಿಂಗ್ ಮಾಡಿಕೊಂಡಿಲ್ಲ ಎಂದು ಭಾವುಕರಾಗಿ ಹೇಳಿದರು.
ಕ್ರೀಕೆಟ್ ಆಟವನ್ನು ಆಡಿಸುವವರಿಗೆ ಗೊತ್ತು ಮ್ಯಾಚ್ ಪೀಕ್ಸಿಂಗ್ ಮಾಡುವುದು ಅದು ನನಗೆ ಬರುವುದಿಲ್ಲ. ಅದರ ಬಗ್ಗೆ ಹೇಳುವವರಿಗೆ ಪಿಕ್ಸಿಂಗ್ ಮಾಡಿಕೊಂಡಿರಬಹುದು ಎಂದು ಪರೋಕ್ಷವಾಗಿ ಲಖನ್ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರಲ್ಲದೆ ಜಾರಕಿಹೊಳಿ ಸಹೋದರರು ತಮ್ಮ-ತಮ್ಮಲ್ಲಿಯೇ ಆರೋಪ ಪತ್ಯಾರೋಪ ಮಾಡುತ್ತಿರುವುದು ಇದ್ದ ಇಬ್ಬರಲ್ಲಿ ಕದ್ದವರಾರು ಎಂಬುವುದು ಇಲ್ಲಿಯ ಜನತೆಗೆ ತಿಳಿದಿದೆ. ನಮ್ಮ ಹೋರಾಟ ಇಲ್ಲಿಯ ಭೃಷ್ಟಾಚಾರದ ವ್ಯವಸ್ಥೆಯ ವಿರುದ್ಧವಾಗಿದ್ದು ಅದು ನಿರಂತರವಾಗಿರುತ್ತದೆ.
ನನ್ನ ಜೊತೆ ಇದ್ದುಕೊಂಡು ಪ್ರತಿ ಸ್ವರ್ಧಿಯನ್ನು ಸೋಲಿಸಲು ಪ್ರಯತ್ನಪಡದೆ ನನ್ನನ್ನು ಸೋಲಿಸಿ ತಾವು ಎಮ್‌ಎಲ್‌ಎ ಆಗುವ ಆಸೆಗಾಗಿ ಪ್ರಾಮಾಣಿಕವಾಗಿ ಕುತಂತ್ರವನ್ನು ಮಾಡಿದ್ದಕ್ಕಾಗಿ ಹಿಂದಿನ ಚುನಾವಣೆಯಲ್ಲಿ ನಾನು ಸೋಲು ಅನುಭವಿಸಬೇಕಾಯಿತು ಇಂತಹ ಕುತಂತ್ರಿಗಳು ಇಂದು ಎಲ್ಲಿ ಸೇರಬೇಕೊ ಅಲ್ಲಿ ಸೇರಿದ್ದಾರೆ ಎಂದು ತಮ್ಮದೇ ಪಕ್ಷದವರ ವಿರುದ್ದ ಹರಿಹಾಯ್ದರು ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನನ್ನ ರಾಜಕೀಯ ನಡೆ ಇರಲ್ಲಿದ್ದು ನೀವು ಕೊಟ್ಟ ನಿರ್ದೇಶನಗಳನ್ನು ಅತ್ಯಂತ ಗಂಭೀರವಾಗಿ ಚಿಂತನೆ ಮಾಡಿ ರವಿವಾರ ಸಾಯಂಕಾಲದವರೆಗೆ ಒಮ್ಮತ್ತದ ನಿರ್ಧಾರಕ್ಕೆ ಬರಲಾಗುವದು ಎಂದು ಪೂಜಾರಿ ಅವರು ತಮ್ಮ ಚುನಾವಣಾ ನಡೆಯನ್ನು ರವಿವಾರದವರೆಗೆ ಕಾಯ್ದಿರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ ಅವರು ವಹಿಸಿದ್ದರು.
ಸಭೆಯಲ್ಲಿ ಮುಖಂಡರಾದ ರಾಜು ಜಾಧವ, ಶಾಮಾನಂದ ಪೂಜಾರಿ, ಸುನೀಲ ಮುರ್ಕಿಭಾಂವಿ, ಸೋಮಶೇಖರ ಮಗದುಮ್ಮ, ಪ್ರೇಮಾ ಚಿಕ್ಕೋಡಿ ಸೇರಿದಂತೆ ಅನೇಕರು ಇದ್ದರು.
ಮನೆ ದೇವರು ಮುಟ್ಟಿ ಆಣೆ ಮಾಡಿದ ಅಶೋಕ ಪೂಜಾರಿ: ಚುನಾವಣೆಗಳಲ್ಲಿ ಜಾರಕಿಹೊಳಿ ಬ್ರದರ್ಸ್ ಬಳಿ ಹಣ ಪಡೆದು ಸೈಲೆಂಟ್ ಆಗಿಲ್ಲ, ನನ್ನ ಮನೆ ದೇವರು ಕೂಡಲ ಸಂಗಮೇಶ್ವರ ದೇವರ ಮೇಲೆ ಆಣೆ ಮಾಡ್ತಿನಿ ಎಂದ ಅಶೋಕ್ ಪೂಜಾರಿ ತಲೆಯ ಮೇಲೆ ನೀರು ಹಾಕಿಕೊಂಡು ಮನೆ ದೇವರ ಮೇಲೆ ಪ್ರಮಾಣ ಮಾಡಿದ ಅಶೋಕ ಪೂಜಾರಿ ಅವರು ನೆರೆದ ಬೆಂಬಲಿಗರ ಮುಂದೆ ಗಳಗಳನೆ ಅತ್ತು ಕಣ್ಣೀರು ಸುರಿಸಿದರು.
ರಮೇಶ ಜಾರಕಿಹೊಳಿ ಆಹ್ವಾನ ಸ್ವಾಗತಾರ್ಹ : ನಿನ್ನೆ ನಡೆದ ಬಹಿರಂಗ ಸಮಾರಂಭದಲ್ಲಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರಿಗೆ ತಮ್ಮನ್ನು ಬೆಂಬಲಿಸುವಂತೆ ಬಹಿರಂಗ ಆಹ್ವಾನ ನೀಡಿದ್ದ ರಮೇಶ ಜಾರಕಿಹೊಳಿ ಅವರ ಆಹ್ವಾನವನ್ನು ಸ್ವಾಗತಿಸಿದ ಅಶೋಕ ಪೂಜಾರಿ ತಮ್ಮ ಮೇಲಿಟ್ಟ ಅಭಿಮಾನಕ್ಕೆ ಧನ್ಯತಾಭಾವವನ್ನು ವ್ಯಕ್ತ ಪಡಿಸಿ ಬೆಂಬಲಿಗರು ತೆಗೆದುಕೊಳ್ಳುವ ನಿರ್ಧಾರವನ್ನು ಸ್ವಾಗತಿಸುವದಾಗಿ ಹೇಳಿದರು
ಬಿಜೆಪಿ ನಾಯಕರಿಗೆ ಋಣಿ : ಬಿಜೆಪಿ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಈಗಾಗಲೇ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಅವರಿಗೆ ನಾನು ಚಿರಋಣಿಯಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ ಅವರು ಸಾಕಷ್ಟು ಬಾರಿ ಮಾತನಾಡಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ ಪಕ್ಷದಲ್ಲಿ ಮುಂದುವರಿಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಆದರೆ ನನಗೆ ನೀವೆ ದೇವರು ನೀವು ನೀಡುವ ಸಲಹೆ ಮೇಲೆ ನಾನು ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆಂದು ಪೂಜಾರಿ ಒತ್ತಿ ಒತ್ತಿ ಹೇಳಿದರು
ಪರ ವಿರೋಧ ಅಭಿಪ್ರಾಯಗಳು: ಚಿಂತನ ಮಂಥನ ಸಭೆಯಲ್ಲಿ ನೆರೆದ ಅಶೋಕ ಪೂಜಾರಿ ಅವರ ಅಭಿಮಾನಿಗಳು ಕೆಲವರು ಅಶೋಕ ಪೂಜಾರಿ ಅವರು ಬಿಜೆಪಿಯಲ್ಲಿಯೇ ಉಳಿದು ನಿಗಮ ಮಂಡಳಿಯಲಿ ಮುಂದುವರೆದು ಅಧಿಕಾರ ಅನುಭವಿಸಬೇಕೆಂದು ಅಭಿಪ್ರಾಯ ವ್ಯಕ್ತ ಪಡಿಸಿದರೆ ಕೆಲವರು ಗೋಕಾಕ ರಾಜಕೀಯ ವ್ಯವಸ್ಥೆಯನ್ನು ಬದಲಿಸಲು ಪಕ್ಷೇತರರಾಗಿ ಚುನಾವಣೆಗೆ ಸ್ವರ್ಧಿಸಬೇಕೆಂದು ಅಭಿಪ್ರಾಯ ವ್ಯಕ್ತ ಪಡಿಸಿದರು
ಬಿಕ್ಕಿ ಬಿಕ್ಕಿ ಅತ್ತ ಸಾಮಾಜಿಕ ಹೋರಾಟಗಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ ಕರೆದಿದ್ದ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ದಸ್ತಗೀರ ಪೈಲ್ವಾನ ಅವರು ಗೋಕಾಕ ಮತಕ್ಷೇತ್ರ ವ್ಯವಸ್ಥೆ ಬದಲು ಮಾಡಿ ಎಂದು ಬಿಕ್ಕಿ ಬಿಕ್ಕಿ ಅತ್ತು ಸಭೆಯಲ್ಲಿ ಕಣ್ಣೀರು ಹಾಕಿದ ಸನ್ನಿವೇಶ ನಡೆಯಿತು. ದಯವಿಟ್ಟು ಗೋಕಾಕ ಮತಕ್ಷೇತ್ರದ ವ್ಯವಸ್ಥೆ ಬದಲು ಮಾಡಿ ಎಂದು ಕಣ್ಣೀರು ಹಾಕಿ ನಮಗೆ ಏನು ಒಳೆಯದಾಗಲಿಲ್ಲ ನಮ್ಮ ಮಕ್ಕಳಿಗಾದರೂ ಒಳ್ಳೆಯದಾಗಲಿ ಎಂದು ಬಿಕ್ಕಿ ಬಿಕ್ಕಿ ಅತ್ತು ಹೋರಾಟ ಮುಂದುವರೆಸಿ ಎಂದು ಹೇಳಿದರು.