ಗೋಕಾಕ:ಬಿಜೆಪಿ ಮುಖಂಡರ ಸಂಧಾನವನ್ನು ದಿಕ್ಕರಿಸಿದ ಪೂಜಾರಿಗೆ ಜೆಡಿಎಸ್ ಟಿಕೆಟ್ ಪಕ್ಕಾ ನಾಳೆ ನಾಮಪತ್ರ ಸಲ್ಲಿಕೆ
ಬಿಜೆಪಿ ಮುಖಂಡರ ಸಂಧಾನವನ್ನು ದಿಕ್ಕರಿಸಿದ ಪೂಜಾರಿಗೆ ಜೆಡಿಎಸ್ ಟಿಕೆಟ್ ಪಕ್ಕಾ ನಾಳೆ ನಾಮಪತ್ರ ಸಲ್ಲಿಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 17 :
ಬಿಜೆಪಿ ಮುಖಂಡರ ಸಂಧಾನವನ್ನು ದಿಕ್ಕರಿಸಿ ಉಪ-ಚುನಾವಣೆ ಕದನಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಅಶೋಕ ಪೂಜಾರಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದ್ದು ಈ ಮೂಲಕ ಅವರು ಮರಳಿ ಗೂಡಿಗೆ ವಾಪಸ್ಸಾಗುವ ಸಾಧ್ಯತೆ ಇದೆ.
ಜೆಡಿಎಸ್ ಪಕ್ಷಕ್ಕೆೆ ಭದ್ರವಾದ ನೆಲೆಯೊದಗಿಸಿದ್ದ ಅಶೋಕ ಪೂಜಾರಿ ಕಳೆದ ವಿಧಾನ ಸಭಾ ಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆಗೊಂಡು ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದರೆ ರಮೇಶ ಜಾರಕಿಹೊಳಿ ವಿರುದ್ದ ಸೋಲನ್ನಪ್ಪಿದ್ದರು.
ಇದೀಗ ರಮೇಶ್ ಬಿಜೆಪಿ ಸೇರ್ಪಡೆಯಾದ ನಂತರ ಅಶೋಕ ಪೂಜಾರಿ ಅವರು ಬಿಜೆಪಿಯಲ್ಲಿ ನೆಲೆ ಇಲ್ಲದಂತಾಗಿದ್ದು, ಕಾಂಗ್ರೆಸ್ ಸೇರಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗಿದ್ದರು. ಅಲ್ಲದೇ ಅವರಿಗೆ ಜೆಡಿಎಸ್ ಟಿಕೇಟ್ ನೀಡುವಾದಾಗಿ ಎಚ್. ಡಿ.ದೇವಗೌಡ ಅವರು ಕೂಡಾ ಪೋನ್ ಮುಖಾಂತರ ಮಾತುಕತೆಯನ್ನು ನಡೆಸಿದ್ದರು ಆದರೆ ಅವರು ತಟಸ್ಥ ನಿಲುವನ್ನು ಹೊಂದಿದ್ದರು.
ಅಶೋಕ ಪೂಜಾರಿ ಅವರು ಶನಿವಾರದಂದು ಬೆಂಬಲಿಗರ ಸಭೆಯನ್ನು ನಡೆಸಿ ಯಾವ ಪಕ್ಷಕ್ಕೆ ಸೇರಬೇಕು ಅನ್ನುವ ಬಗ್ಗೆ ತಿರ್ಮಾನಕ್ಕೆ ಬರದೇ ಆಣೆ ಪ್ರಮಾಣದಲ್ಲಿ ಕಾಲವನ್ನು ದೂಡಿದ್ದರು. ಸಂಜೆ ವೇಳೆಗೆ ಬಿಜೆಪಿ ಬಿಟ್ಟು ಹೋಗದಂತೆ ಕೇಂದ್ರ ಸಚಿವ ಸುರೇಶ ಅಂಗಡಿ ಹಾಗೂ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಗೋಕಾಕ ಉಸ್ತುವಾರಿ ಎ.ಎಸ್. ಪಾಟೀಲ (ನಡಹಳ್ಳಿ), ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹಾಗೂ ರಮೇಶ ಜಾರಕಿಹೊಳಿ ಅವರ ಮನವೋಲಿಸುವ ಪ್ರಯತ್ನಗಳು ನಡೆದಿದ್ದವು. ರವಿವಾರ ಕೂಡಾ ಗೋಕಾಕ ಉಸ್ತುವಾರಿ ಎ.ಎಸ್. ಪಾಟೀಲ (ನಡಹಳ್ಳಿ), ಅವರು ಮತ್ತೊಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದರು. ಅಶೋಕ ಪೂಜಾರಿ ಅವರ ಬರುವಿಕೆಗಾಗಿ ಇಡಿ ದಿನ ಬಿಜೆಪಿ ಪಕ್ಷವು ಕಾಯುತ್ತಿತ್ತು. ಆದರೆ ಅವರು ಬಿಜೆಪಿ ಮುಖಂಡರ ನಿರೀಕ್ಷೆಯನ್ನು ಹುಸಿಗೊಳಿಸಿ ತಮ್ಮ ಮಾತೃಪಕ್ಷ ಜೆಡಿಎಸ್ ತೆನೆ ಹೊತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದು ಸೋಮವಾರ ನಾಮಪತ್ರ ಸಲ್ಲಿಸಲು ಉತ್ಸುಕರಾಗಿದ್ದಾರೆ.
ಅಶೋಕ ಪೂಜಾರಿ ಅವರ ನಾಮಪತ್ರ ಸಲ್ಲಿಸಲು ವಿಶೇಷ ವಿಮಾನದ ಮೂಲಕ ಚಿಕ್ಕಬಳ್ಳಾಪುರದಿಂದ ಬೆಳಗಾವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ಖಚಿತ ಪಡೆಸಿವೆ