ಗೋಕಾಕ:ರಮೇಶ್ ಆಯ್ಕೆಯಿಂದ ಗೋಕಾಕಕ್ಕೆ ಶುಕ್ರದೆಸೆ-ಮಾಜಿ ಸಚಿವ ಉಮೇಶ ಕತ್ತಿ ಹೇಳಿಕೆ
ರಮೇಶ್ ಆಯ್ಕೆಯಿಂದ ಗೋಕಾಕಕ್ಕೆ ಶುಕ್ರದೆಸೆ-ಮಾಜಿ ಸಚಿವ ಉಮೇಶ ಕತ್ತಿ ಹೇಳಿಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 28 :
ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಗೋಕಾಕ ಮತಕ್ಷೇತ್ರದಲ್ಲಿ ಹಿರಿಯ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಉಮೇಶ ಕತ್ತಿ ಅವರು ಮತಬೇಟೆ ಆರಂಭಿಸಿದ್ದು, ಇವರಿಗೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾಥ್ ಕೊಟ್ಟಿದ್ದಾರೆ.
ನಗರದ ಆಚಾರ್ಯ ಗಲ್ಲಿ, ಬಾಜಿ ಮಾರ್ಕೇಟ್, ಅಪ್ಸರಾ ಕೂಟ, ಸೋಮವಾರ ಪೇಟ, ಬಣಗಾರ ಗಲ್ಲಿ, ಮರಾಠಾ ಗಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಪಾದಯಾತ್ರೆ ನಡೆಸಿ ಮತಯಾಚಿಸುತ್ತಿದ್ದಾರೆ.
ರಮೇಶ್ ಆಯ್ಕೆಯಿಂದ ಗೋಕಾಕಕ್ಕೆ ಶುಕ್ರದೆಸೆ : ಗೋಕಾಕ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡುವುದರಿಂದ ಗೋಕಾಕ ಕ್ಷೇತ್ರಕ್ಕೆ ಶುಕ್ರದೆಸೆ ಆರಂಭವಾಗಲಿದೆ. ಕೇವಲ ಈ ಭಾಗದ ಶಾಸಕರಾಗಿ ಮಾತ್ರ ಆಯ್ಕೆಯಾಗುವುದಿಲ್ಲ.ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸುವರೆಂದು ಹಿರಿಯ ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದರು.
ರಮೇಶ್ ಜಾರಕಿಹೊಳಿ ಅವರು ಸಚಿವರಾಗುವುದರಿಂದ ಬೆಳಗಾವಿ ಸಮಗ್ರ ಅಭಿವೃದ್ಧಿಯಾಗುತ್ತದೆ. ಜೊತೆಗೆ ನೀರಾವರಿ ಕ್ಷೇತ್ರವು ಸಹ ಅಭಿವೃದ್ಧಿಯಾಗುತ್ತದೆ. ಗೋಕಾಕ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ರಮೇಶ ಜಾರಕಿಹೊಳಿ ಅವರು ಕ್ಷೇತ್ರದ ಮತದಾರರ ನಾಡಿಮಿಡಿತವನ್ನು ಅರಿತಿದ್ದಾರೆ. ಕ್ಷೇತ್ರಾದ್ಯಂತ ರಮೇಶ ಜಾರಕಿಹೊಳಿ ಪರ ವ್ಯಾಪಕ ಅಲೆ ಇದೆ. ಯಡಿಯೂರಪ್ಪನವರ ಸರ್ಕಾರ ಮುಂದಿನ ಮೂರುವರೆ ವರ್ಷ ಕಾಲ ಮುಂದುವರೆಯಲು ಕಾಂಗ್ರೇಸ್ ನಿಂದ ಸಿಡಿದೆದ್ದು ಬಿಜೆಪಿ ಸರ್ಕಾರಕ್ಕೆ ಟಾನಿಕ್ ಆಗಿರುವ ರಮೇಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡುವಂತೆ ಕೋರಿದ ಅವರು,ಚಿನ್ಹೆಯ ಗೊಂದಲು ಮಾಡಿಕೊಳ್ಳದೇ ಇವರ ಶೇಜ್ ನಂ.2 ಇದ್ದು ಗುರ್ತು ಕಮಲ ಇದೆ. ಕಮಲ ಗುರ್ತಿಗೆ ಮತ ನೀಡಿ ಗೋಕಾಕದಲ್ಲಿ ಬಿಜೆಪಿ ಕಮಾಲ್ ಮಾಡಲು ಆಶೀರ್ವಾದ ಮಾಡುವಂತೆ ಶಾಸಕ ಉಮೇಶ ಕತ್ತಿ ಮನವಿ ಮಾಡಿದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಜಿಲ್ಲೆಯ ಮೂರು ಕ್ಷೇತ್ರಗಳು ಸೇರಿದಂತೆ ಎಲ್ಲ 15 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದಾರೆ. ನಿಷ್ಠಾವಂತರಾಗಿದ್ದ ರಮೇಶ ಜಾರಕಿಹೊಳಿ ಅವರು ತಮಗಿರುವ ಎಲ್ಲ ಸ್ಥಾನಮಾನಗಳನ್ನು ಬಿಟ್ಟು ರಾಜ್ಯದಲ್ಲಿ ಸುಭದ್ರ ಆಡಳಿತ ನಡೆಸಲು ಯಡಿಯೂರಪ್ಪನವರಿಗೆ ಬೆಂಬಲ ನೀಡಿ ಮುಖ್ಯಮಂತ್ರಿಯನ್ನಾಗಿಸಲು ಇನ್ನಿಲ್ಲದ ಹರಸಾಹಸ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಸಲು ರಮೇಶ ಜಾರಕಿಹೊಳಿ ಅವರಿಗೆ ಆಶೀರ್ವಾದ ನೀಡುವಂತೆ ಕೋರಿದರು.
ನಿರಾಣಿ ಶುಗರ್ಸ್‍ನ ಸಂಗಮೇಶ ನಿರಾಣಿ, ಕೆಎಲ್‍ಇ ನಿರ್ದೇಶಕ ರಾಜು ಮುನವಳ್ಳಿ, ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ, ರಾಮದುರ್ಗದ ಮಲ್ಲಣ್ಣ ಯಾದವಾಡ, ಜೆಎಸ್‍ಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಆರ್.ಎಸ್.ಗುಣಕಿ, ಪ್ರಭಾ ಶುಗರ್ ಅಧ್ಯಕ್ಷ ಅಶೋಕ ಪಾಟೀಲ, ಜ್ಯೋತಿಭಾ ಸುಭಂಜಿ, ಪರುಶರಾಮ ಭಗತ, ಡಾ: ಜಿ.ಆರ್.ಸೂರ್ಯವಂಶಿ, ಆನಂದ ಗೋಟಡಕಿ, ಲಕ್ಷ್ಮಣ ತಪಸಿ, ಮೂರ್ತೇಲಿ, ಬಿಜೆಪಿ ಪದಾಧಿಕಾರಿಗಳು,ಮುಖಂಡರುಗಳು ಉಪಸ್ಥಿತರಿದ್ದರು.