ಗೋಕಾಕ:ರಮೇಶ ಜಾರಕಿಹೊಳಿ ಪರ ಕೇಂದ್ರ ಸಚಿವ ಸುರೇಶ ಅಂಗಡಿ ಗೋಕಾಕ ನಗರದಲ್ಲಿ ಭರ್ಜರಿ ಮತಬೇಟೆ
ರಮೇಶ ಜಾರಕಿಹೊಳಿ ಪರ ಕೇಂದ್ರ ಸಚಿವ ಸುರೇಶ ಅಂಗಡಿ ಗೋಕಾಕ ನಗರದಲ್ಲಿ ಭರ್ಜರಿ ಮತಬೇಟೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 29 :
ಕಾಂಗ್ರೇಸ್ ಪಕ್ಷದಲ್ಲಿದ್ದಾಗ ಸಾಕಷ್ಟು ಕಹಿ ಘಟನೆಗಳನ್ನು ಸಹಿಸಿಕೊಂಡು ಕೊನೆಗೆ ಪರಿಸ್ಥಿತಿ ಮೀರಿದಾಗ ಅದರಿಂದ ಹೊರ ಬಂದು ರಾಜಕೀಯ ವನವಾಸ ಅನುಭವಿಸಿದ ರಮೇಶ ಜಾರಕಿಹೊಳಿ ಅವರು ಮಾಡಿರುವ ತ್ಯಾಗದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಾರಾಜಿಸುತ್ತಿದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.
ಗುರುವಾರ ರಾತ್ರಿ ನಗರದಲ್ಲಿ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪ್ರಚಾರಾರ್ಥವಾಗಿ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಗೋಕಾಕದ ಶಕ್ತಿ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಯಡಿಯೂರಪ್ಪನವರ ಸರ್ಕಾರ ಸುಭದ್ರವಾಗಿರಬೇಕು. ಸ್ಥಿರವಾಗಿರಬೇಕು. ಡಿ. 5 ರಂದು ನಡೆಯುವ ಚುನಾವಣೆಯಲ್ಲಿ ಯಡಿಯೂರಪ್ಪನವರ ಕೈ ಬಲಪಡಿಸಲು ಬಿಜೆಪಿಗೆ ಮತ ಹಾಕಿ ಮತ್ತೊಮ್ಮೆ ಜನಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು. ಈ ಚುನಾವಣೆ ರಾಜ್ಯದ ದಿಕ್ಷೂಚಿಯನ್ನೇ ಬದಲಾಯಿಸುತ್ತದೆ. ಎಲ್ಲ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪನವರನ್ನು ಜಾರಕಿಹೊಳಿ ಸಹೋದರರು ಪ್ರೀತಿ-ವಿಶ್ವಾಸದಿಂದ ಕಾಣುತ್ತಿದ್ದಾರೆ. ಇವರಿಗಾಗಿಯೇ ಎರಡು ಬಾರಿ ಬಾಲಚಂದ್ರ ಮತ್ತು ರಮೇಶ ಜಾರಕಿಹೊಳಿ ಅವರು ಪಕ್ಷಗಳನ್ನು ತ್ಯಜಿಸಿ ಯಡಿಯೂರಪ್ಪನವರನ್ನು ಸಿಎಂ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಅವರ ಋಣ ತೀರಿಸಲು ನಾವೆಲ್ಲ ಒಂದಾಗಿ ಕಮಲ ಗುರ್ತಿಗೆ ಮತ ಹಾಕಿದರೆ ಮುಂದೆ ಸಚಿವರಾಗುತ್ತಾರೆಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳ ಸರ್ವಾಂಗೀಣ ಏಳ್ಗೆಗಾಗಿ ರಮೇಶ ಜಾರಕಿಹೊಳಿ ಅವರನ್ನು ಆರಿಸಿ ತನ್ನಿ. ಬಾಕಿ ಉಳಿದಿರುವ ಹಾಗೂ ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿ ವ್ಯವಸ್ಥಿತವಾಗಿ ಗೋಕಾಕ ನಗರ ಹಾಗೂ ಮತಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ. ಹೊಸ ಬದಲಾವಣೆಗೆ ನಾಂದಿ ಹಾಡೋಣ. ಮೂರುವರೆ ವರ್ಷಗಳ ಕಾಲ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿಕ್ಕೆ ಈ ಗೆಲುವು ಸಹಕಾರಿಯಾಗಲಿದೆ. ಯಡಿಯೂರಪ್ಪನವರು ರಾಜ್ಯ ಕಂಡ ಸಮರ್ಥ ಆಡಳಿತಗಾರರಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ರಮೇಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡುವದರಿಂದ ಗೋಕಾಕ ಕ್ಷೇತ್ರಕ್ಕೆ ಡಬಲ್ ಧಮಾಕಾ ಹೊಡೆಯಲಿದೆ. ನೇರವಾಗಿ ರಚಿತಗೊಂಡಿರುವ ಸರ್ಕಾರದಲ್ಲಿ ಸಚಿವರಾಗುತ್ತಾರೆ. ಇಂತಹ ಯೋಗ ಯಾವ ಶಾಸಕರಿಗೂ ಸಿಗುವುದಿಲ್ಲ. ಇಬ್ಬರು ಸೇರಿಕೊಂಡು ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳ ಕಾರ್ಯಕರ್ತರ ಅಹವಾಲುಗಳಿಗೆ ಸ್ಪಂದಿಸಿ ಕ್ಷೇತ್ರಗಳ ಅಭ್ಯುದಯಕ್ಕೆ ಶ್ರಮಿಸುವುದಾಗಿ ಹೇಳಿದರು.
ಶಾಸಕ ಅನೀಲ ಬೆನಕೆ, ಜಿಲ್ಲಾ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ, ಆರ್.ಎಸ್. ಮುತಾಲಿಕದೇಸಾಯಿ, ಮಲ್ಲಣ್ಣ ಯಾದವಾಡ, ಮಾಜಿ ನಗರಾಧ್ಯಕ್ಷ ಶಿದ್ಲಿಂಗ ದಳವಾಯಿ, ಎಸ್.ಎ. ಕೋತವಾಲ್, ಅಬ್ಬಾಸ ದೇಸಾಯಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ವ್ಹಿ. ದೇಮಶೆಟ್ಟಿ, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ಬಸು ಹಿರೇಮಠ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ಗಣ್ಯ ವರ್ತಕರಾದ ವೀರಣ್ಣಾ ಬಿದರಿ, ಮಹಾಂತೇಶ ತಾಂವಶಿ, ವಿಕ್ರಮ ಅಂಗಡಿ, ಶಿವಾನಂದ ಹತ್ತಿ, ಗಿರೀಶ ಖೋತ, ಎಚ್.ಡಿ. ಮುಲ್ಲಾ, ಮುಂತಾದವರು ಉಪಸ್ಥಿತರಿದ್ದರು.
ಕೇಂದ್ರ ಸಚಿವ ಸುರೇಶ ಅಂಗಡಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಗರದ ವಿವಿಧೆಡೆ ಪಾದಯಾತ್ರೆ ಮೂಲಕ ಸಂಚರಿಸಿ ರಮೇಶ ಜಾರಕಿಹೊಳಿ ಅವರ ಪರ ಮತಯಾಚಿಸಿದರು.