ಗೋಕಾಕ:ಡಿಸೆಂಬರ್ 6ರಂದು ಹೈದರಾಬಾದ್ ರೆಸಾರ್ಟ್ ಸಂಗತಿಯನ್ನು ಎಳೆ ಎಳೆಯಾಗಿ ಬಯಲು ಮಾಡುತ್ತೇನೆ : ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ
ಡಿಸೆಂಬರ್ 6ರಂದು ಹೈದರಾಬಾದ್ ರೆಸಾರ್ಟ್ ಸಂಗತಿಯನ್ನು ಎಳೆ ಎಳೆಯಾಗಿ ಬಯಲು ಮಾಡುತ್ತೇನೆ : ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 30 :
ಡಿಸೆಂಬರ್ 6ರಂದು ಹೈದರಾಬಾದ್ ರೆಸಾರ್ಟ್ ಸಂಗತಿಯನ್ನು ಎಳೆ ಎಳೆಯಾಗಿ ಬಯಲು ಮಾಡುತ್ತೇನೆ. ಸುಳ್ಳು ಹೇಳೋಕೆ ಒಂದು ಮೀತಿಯಿರಲಿ. ಮಕ್ಕಳಾಣೆ. ಯಾರನ್ನೂ ಬಿಜೆಪಿಗೆ ಬರುವಂತೆ ಆಹ್ವಾನಿಸಿಲ್ಲವೆಂದು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಕೆಂಡಮಂಡಲಾದರು.
ನಗರದಲ್ಲಿ ಕೆಎಲ್‍ಇ ಸಂಸ್ಥೆಯ ಶಾಲಾ ಆವರಣದಲ್ಲಿ ಶನಿವಾರದಂದು ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷ್ಮೀಯ ನಿಜವಾದ ಮುಖವಾಡವನ್ನು ಚುನಾವಣೆ ಮುಗಿದ ಮಾರನೇ ದಿನವೇ ಸುದ್ದಿಗೋಷ್ಠಿಯಲ್ಲಿ ಬಯಲು ಮಾಡುವುದಾಗಿ ಹೇಳಿದರು.
ಕಾಂಗ್ರೇಸ್ ಪಕ್ಷ ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಕಾಲದ ಕಾಂಗ್ರೇಸ್ ಪಕ್ಷವಾಗಿ ಉಳಿದಿಲ್ಲ. ನಿಷ್ಠಾವಂತರಿಗೆ ಯೋಗ್ಯ ಬೆಲೆ ಇಲ್ಲ. ನಾಯಕರುಗಳ ಬಾಲ ಬಡಿಯುವ, ಕೈಚೀಲ ಹಿಡಿಯುವವರಿಗೆ ಅಲ್ಲಿ ಬೆಲೆ ಇದೆ. 1985ರ ಚುನಾವಣೆಯಲ್ಲಿ ಮೊದಲಬಾರಿಗೆ ಸ್ಪರ್ಧೆ ಮಾಡಿ ಒಂದು ಸಾವಿರ ಮತಗಳಿಂದ ಸೋಲನ್ನು ಅನುಭವಿಸಿದರೇ, ಅಂದು ಸುಮಾರು 40 ಸಾವಿರ ಮತಗಳ ಅಂತರದಿಂದ ಸೋತಿದ್ದ ಡಿ.ಕೆ.ಶಿವಕುಮಾರ ಇಂದು ಪಕ್ಷದಲ್ಲಿ ಮಾಸ್-ಲೀಡರ್‍ನಾಗಿದ್ದಾನೆ. ಇಂತವರಿಗೆ ಪಕ್ಷ ಬೆಂಬಲಿಸುತ್ತಿದೆ. ಬೆಂಗಳೂರಿನ ನಾಯಕರು ಉತ್ತರ ಕರ್ನಾಟಕದ ನಾಯಕರ ಏಳ್ಗೆಯನ್ನು ಸಹಿಸದೇ ಲಿಂಗಾಯತರಿಗೆ ಹಿಂದುಳಿದರವರಿಗೆ ಜಗಳ ಹಚ್ಚಿ ತಮ್ಮ ಬೆಳೆಗಳನ್ನು ಬೇಯಿಸಿಕೊಂಡು, ನಾನು ಮತ್ತು ಪ್ರಭಾಕರ ಕೋರೆ ಒಂದಾದರೇ ನಮಗೆ ಉಳಿಗಾಲವಿಲ್ಲವೆಂದು ನಮ್ಮ ಟೀಕೆಟನ್ನು ಅಂದು ತಪ್ಪಿಸಿದ್ದರು. ನಾವು ಆವಾಗಲೇ ಇಬ್ಬರೂ ಒಂದಾಗಬೇಕಾಗಿತ್ತು ಆದರೆ ಈಗ ಕಾಲಕೂಡಿ ಬಂದಿದೆ. ನಾವಿಬ್ಬರೂ ಒಂದಾಗಿದ್ದೇವೆ. ಎಂದು ಹೇಳಿದರು.
ಸಿದ್ಧರಾಮಯ್ಯನವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ನನ್ನ ಬಗ್ಗೆ ಎಲ್ಲ ಕಡೆಗಳಲ್ಲೂ ವ್ಯಯಕ್ತಿಕವಾಗಿ ನಿಂದಿಸುತ್ತಿದ್ದಾರೆ. ಇದು ನಿಲ್ಲಬೇಕು. ಹೀಗೆಯೇ ಮುಂದುವರೆದರೆ ಸಿದ್ಧರಾಮಯ್ಯದಿಯಾಗಿ ಕಾಂಗ್ರೇಸ್ ಪಕ್ಷದ ನಾಯಕರುಗಳ ಬಂಡವಾಳವನ್ನು ಬಯಲು ಮಾಡುತ್ತೇನೆ ಎಂದು ಹೇಳಿದರು.
ನನಗೂ ಮಾತನಾಡೋಕೆ ಬರುತ್ತದೆ. ಚುನಾವಣಾ ಸಂದರ್ಭದಲ್ಲಿ ಯಾರ ವಿರುದ್ಧವೂ ಮಾತನಾಡಿ ವಿರುದ್ಧ ಕಟ್ಟಿಕೊಳ್ಳಬೇಡಿ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಹಾಗೂ ಸಹೋದರ ಬಾಲಚಂದ್ರ ಜಾರಕಿಹೊಳಿ ಕಿವಿಮಾತು ಹೇಳಿದ್ದಾರೆ. ಹೀಗಾಗಿ ನಾನು ಯಾರ ವಿರುದ್ಧವೂ ಮಾತನಾಡುತ್ತಿಲ್ಲ. ಡಿ.5ರಂದು ಮತದಾನ ನಡೆಯಲಿದ್ದು, ಡಿ.6ರಂದು ಮುಂಜಾನೆ 11 ಗಂಟೆಗೆ ಗೋಕಾಕದಲ್ಲಿ ನಾನೇ ಸುದ್ದಿಗೋಷ್ಠಿಯನ್ನು ಕರೆದು ಹೈದರಾಬಾದ್ ರಾಜಕೀಯವನ್ನು ಬಯಲು ಮಾಡುತ್ತೇನೆ ಎಂದು ಕಾಂಗ್ರೆಸ್ಸಿಗರ ವಿರುದ್ಧ ರಮೇಶ ಜಾರಕಿಹೊಳಿ ಹರಿಹಾಯ್ದರು.