RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ರಮೇಶ ಜಾರಕಿಹೊಳಿ ಅವರಿಗೆ ವೀರಶೈವ ಲಿಂಗಾಯತ ಸಮಾಜದ ಸಂಪೂರ್ಣ ಬೆಂಬಲ-ಡಾ. ಪ್ರಭಾಕರ ಕೋರೆ

ಗೋಕಾಕ:ರಮೇಶ ಜಾರಕಿಹೊಳಿ ಅವರಿಗೆ ವೀರಶೈವ ಲಿಂಗಾಯತ ಸಮಾಜದ ಸಂಪೂರ್ಣ ಬೆಂಬಲ-ಡಾ. ಪ್ರಭಾಕರ ಕೋರೆ 

ರಮೇಶ ಜಾರಕಿಹೊಳಿ ಅವರಿಗೆ ವೀರಶೈವ ಲಿಂಗಾಯತ ಸಮಾಜದ ಸಂಪೂರ್ಣ ಬೆಂಬಲ-ಡಾ. ಪ್ರಭಾಕರ ಕೋರೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 30 :

 
ಎಲ್ಲರನ್ನೂ ಜೊತೆ-ಜೊತೆಯಲ್ಲಿ ಕರೆದುಕೊಂಡು ಹೋಗುವ ಏಕೈಕ ವೀರಶೈವ ಲಿಂಗಾಯತ ಸಮಾಜವಾಗಿದೆ. ನಮ್ಮ ಸಮಾಜದ ಪ್ರಶ್ನಾತೀತ ನಾಯಕರಾಗಿರುವ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲಿಕ್ಕೆ ಬಹುಮೂಲ್ಯ ತ್ಯಾಗ ಮಾಡಿರುವ ರಮೇಶ ಜಾರಕಿಹೊಳಿ ಅವರಿಗೆ ನಮ್ಮೆಲ್ಲ ವೀರಶೈವ ಲಿಂಗಾಯತ ಸಮಾಜ ಬಾಂಧವರು ಮತ ನೀಡಿ ಆಶೀರ್ವಾದ ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ, ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಸಂಸದ ಡಾ. ಪ್ರಭಾಕರ ಕೋರೆ ಅವರು ಸಮಾಜ ಬಾಂಧವರಿಗೆ ಕರೆ ನೀಡಿದರು.
ಶನಿವಾರದಂದು ನಗರದ ಕೆಎಲ್‍ಇ ಸಂಸ್ಥೆಯ ಶಾಲಾ ಆವರಣದಲ್ಲಿ ಜರುಗಿದ ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳ ಸಭೆಯಲ್ಲಿ ಅವರು ಮಾತನಾಡಿದರು.
ಇಡೀ ನಮ್ಮ ಸಮಾಜವು ನಿಮ್ಮ ಬೆನ್ನಿಗಿದೆ. ಹೆದರುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಯಡಿಯೂರಪ್ಪನವರ ಕೈ ಬಲಪಡಿಸಲು ಲಿಂಗಾಯತ ಸಮಾಜದ ಪ್ರತಿ ಮತಗಳು ನಿಮಗೆ ಬರಲಿದ್ದು, ನಿಮ್ಮನ್ನು ಆರಿಸಿ ಕಳುಹಿಸುವ ಕರ್ತವ್ಯ ನಮ್ಮದಾಗಿದೆ ಎಂದು ರಮೇಶ ಜಾರಕಿಹೊಳಿ ಅವರಿಗೆ ಅಭಯ ಹಸ್ತ ನೀಡಿದರು.
ಸಪ್ತರ್ಷಿಗಳ ತ್ಯಾಗ, ಪರಿಶ್ರಮದ ಫಲವಾಗಿ ಕೆಎಲ್‍ಇ ಸಂಸ್ಥೆಯು ಇಂದು ವಿಶ್ವಾದ್ಯಂತ ಹೆಮ್ಮರವಾಗಿ ಬೆಳೆದಿದೆಯೋ, ಹಾಗೆಯೇ ನಮ್ಮ ಸಮಾಜದ ಅಧಿಪತಿಯಾಗಿರುವ ಬಿ.ಎಸ್. ಯಡಿಯೂರಪ್ಪನವರನ್ನು ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಕಾರಣಿ ಭೂತರಾಗಿರುವ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸಿ, ಆಶೀರ್ವದಿಸುವ ಮೂಲಕ ನಮ್ಮ ಸಮಾಜವು ಅವರಿಗೆ ಚಿರಋಣಿಯಾಗಿರುತ್ತದೆ ಎಂದು ಹೇಳಿದರು.
ನಾನು ಹಾಗೂ ರಮೇಶ ಒಳ್ಳೇಯ ಸ್ನೇಹಿತರು. ಪ್ರತಿಬಾರಿ ಅವರನ್ನು ಭೇಟಿ ಮಾಡಿದಾಗಲೆಲ್ಲ ರಾಜಕೀಯ ಚರ್ಚೆ ಮಾಡುತ್ತಿರುತ್ತೇವೆ. ಸಾಕಷ್ಟು ಬಾರಿ ನಮ್ಮ ಪಕ್ಷಕ್ಕೆ ಬನ್ನಿ ಅಂತಾ ಅವರಿಗೆ ಮುಕ್ತವಾಗಿ ಆಹ್ವಾನಿಸುತ್ತಿದ್ದೆ. ಇಂತಹ ವ್ಯಕ್ತಿ ಕೆಟ್ಟ ಪಕ್ಷದಲ್ಲಿದ್ದಿಯಾ ಅಂತಾ ಅವರಿಗೆ ಹೇಳುತ್ತಿದ್ದೆ. ರಮೇಶನಂತಹ ನಿಷ್ಠಾವಂತ ಸೇವಕನನ್ನು ಕಾಂಗ್ರೇಸ್ ಪಕ್ಷ ನಡೆಸಿಕೊಂಡಿರುವ ರೀತಿ ಯಾರೂ ಮೆಚ್ಚುವಂತದಲ್ಲ. ಸಾಕಷ್ಟು ಸಲ ಯೋಚನೆ ಮಾಡಿ ದಿಟ್ಟ ನಿರ್ಧಾರದಿಂದ ಯಡಿಯೂರಪ್ಪನವರ ಸರ್ಕಾರವನ್ನು ಪ್ರತಿಷ್ಠಾಪಿಸಲು 8-10 ತಿಂಗಳು ವನವಾಸ ಮಾಡಿ ಶ್ರಮಿಸಿದ್ದಾರೆ. ಅಂತೂ ರಮೇಶ ಜಾರಕಿಹೊಳಿ ಅವರು ಈಗ ಬಿಜೆಪಿಗೆ ಸೇರುವ ಮೂಲಕ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದು. ಹಾಗೂ ನಾವಿಬ್ಬರೂ ಒಂದೇ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವದು ಖುಷಿಯಾಗುತ್ತಿದೆ ಎಂದು ಹೇಳಿದರು.
ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರ ಬೆನ್ನಿಗೆ ನಾವುಗಳು ಗೆಲುವಿಗಾಗಿ ಟೊಂಕು ಕಟ್ಟಿ ನಿಲ್ಲುತ್ತೇವೆ. ನಮ್ಮ ಸಮುದಾಯ ಹಾಗೂ ಇತರೆ ಸಮಾಜಗಳ ಬೆಂಬಲದಿಂದ ರಮೇಶ ಜಾರಕಿಹೊಳಿ ಅವರು ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೇಟ್ ತಪ್ಪಿಸಿದರು: 1989ರಲ್ಲಿ ವಿರೇಂದ್ರ ಪಾಟೀಲ ಅವರು ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭದಲ್ಲಿ ನಾನು ಸದಲಗಾ ಕ್ಷೇತ್ರದಿಂದ ಮತ್ತು ರಮೇಶ ಜಾರಕಿಹೊಳಿ ಅವರು ಗೋಕಾಕ ಕ್ಷೇತ್ರದಿಂದ ವಿಧಾನ ಸಭೆಗೆ ಸ್ಪರ್ಧಿಸಲು ಟಿಕೇಟ್ ಕೇಳಿದ್ದೇವು. ಇಬ್ಬರಿಗೂ ಬಿ ಫಾರ್ಮ ಕೂಡಾ ಸಿಕ್ಕಿತ್ತು. ಆದರೆ ಬೆಂಗಳೂರಿನಿಂದ ಸ್ವಕ್ಷೇತ್ರಕ್ಕೆ ಮರಳಿ ಬರುವುದರೊಳಗಾಗಿ ಪಕ್ಷದ ಮುಖಂಡರೊಬ್ಬರ ಪಿತೂರಿನಿಂದ ನಮಗೆ ಸ್ಪರ್ಧಿಸಲು ಅವಕಾಶ ಕೊಡಲಿಲ್ಲ. ಒಂದು ವೇಳೆ ಅವಕಾಶ ಕೊಟ್ಟಿದ್ದರೆ ಆಗಲೇ ನಾವಿಬ್ಬರೂ ವಿರೇಂದ್ರ ಪಾಟೀಲ ಅವರ ಸಂಪುಟದಲ್ಲಿ ಸಚಿವರಾಗುತ್ತಿದ್ದೇವು ಎಂದು ಹಿಂದಿನ ಘಟನೆಗಳನ್ನು ಡಾ.ಕೋರೆ ಮೆಲಕು ಹಾಕಿದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ರಾಷ್ಟ್ರದ ಏಕತೆ, ಅಖಂಡತೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೈತ ನಾಯಕ ಯಡಿಯೂರಪ್ಪನವರ ನಾಯಕತ್ವ ಮೆಚ್ಚಿಕೊಂಡು ರಮೇಶ ಜಾರಕಿಹೊಳಿ ಅವರು ಬಿಜೆಪಿಗೆ ಬಂದಿರುವುದು ಸ್ವಾಗತಾರ್ಹ. ಇದರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ದೊಡ್ಡ ಹೊಣೆಗಾರಿಕೆ ರಮೇಶ ಅವರ ಮೇಲಿದೆ. ಯಡಿಯೂರಪ್ಪನವರಿಗೆ ಶಕ್ತಿ ತುಂಬುತ್ತಿರುವ ರಮೇಶ ಜಾರಕಿಹೊಳಿ ಅವರಿಗೆ ಸಮಾಜ ಬಾಂಧವರು ಶೇ.90ರಷ್ಟು ಮತಗಳನ್ನು ನೀಡಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ಮಾತನಾಡಿ, ಈ ಬಾರಿ ಕಮಲ ಹೂವಿನ ಚಿನ್ಹೆಯಡಿ ಸ್ಪರ್ಧಿಸುತ್ತಿರುವ ರಮೇಶ ಜಾರಕಿಹೊಳಿ ಅವರನ್ನು ಆಶೀರ್ವದಿಸಬೇಕು. ಜೊತೆಗೆ ರಮೇಶ್ ಜಾರಕಿಹೊಳಿ ಅವರು ಪ್ರಮುಖ ಖಾತೆಯೊಂದರ ಸಚಿವರಾಗಿ ಕೆಲಸ ನಿರ್ವಹಿಸಲಿದ್ದಾರೆ ಇದರಿಂದ ಕ್ಷೇತ್ರದ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಮಾತನಾಡಿ, ಡಿ.5ರಂದು ನಡೆಯುವ ಚುನಾವಣೆಯಲ್ಲಿ ಸಮಾಜ ಬಾಂಧವರು ಕಮಲ ಚಿನ್ಹೆಗೆ ಮತ ನೀಡುವ ಮೂಲಕ ಕ್ಷೇತ್ರದ ಸರ್ವತೋಮುಖ ಪ್ರಗತಿಗಾಗಿ ಆಶೀರ್ವದಿಸಬೇಕು. ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಸಾಮಾಜಿಕ ನ್ಯಾಯದ ತತ್ವದಡಿ ಕೆಲಸ ನಿರ್ವಹಿಸುತ್ತೇನೆ. ನನಗೆ ಬೆಂಬಲ ನೀಡಿ ಆಶೀರ್ವದಿಸುತ್ತಿರುವ ಸಮಸ್ತ ಸಮಾಜ ಬಾಂಧವರಿಗೆ ಎಂದಿಗೂ ಋಣಿಯಾಗಿರುವೆ ಎಂದು ಹೇಳಿದರು.
ಸವದತ್ತಿ ಶಾಸಕ ಆನಂದ ಮಾಮನಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ, ಮಾಜಿ ಶಾಸಕ ರಮೇಶ ಭೂಸನೂರ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿದ್ದರು.

Related posts: