RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ನಾನು ಸಿಎಂ ಆಗಿದ್ದು ರಮೇಶ ಜಾರಕಿಹೊಳಿ ಅವರ ತ್ಯಾಗದಿಂದ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಗೋಕಾಕ:ನಾನು ಸಿಎಂ ಆಗಿದ್ದು ರಮೇಶ ಜಾರಕಿಹೊಳಿ ಅವರ ತ್ಯಾಗದಿಂದ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 

ನಾನು ಸಿಎಂ ಆಗಿದ್ದು ರಮೇಶ ಜಾರಕಿಹೊಳಿ ಅವರ ತ್ಯಾಗದಿಂದ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಡಿ 1 :

 
ಅಪವಿತ್ರ ಮೈತ್ರಿ ಸರ್ಕಾರ ಹಾಗೂ ಭೃಷ್ಟ ರಾಜಕೀಯದಿಂದ ಹೊರ ಬಂದು ಕೊಟ್ಟ ಮಾತಿಗೆ ತಪ್ಪದೆ ಬೆಂಬಲ ನೀಡಿದ ಪರಿಣಾಮ ಇಂದು ನಿಮ್ಮೆಲ್ಲರೆದುರು ಮುಖ್ಯಮಂತ್ರಿಯಾಗಿದ್ದೇನೆ, ಇದಕ್ಕೆಲ್ಲ ಕೇಂದ್ರ ಬಿಂದು ಜನಾನುರಾಗಿ ರಮೇಶ ಜಾರಕಿಹೊಳಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇಲ್ಲಿಯ ಎಸ್.ಡಿ.ಟಿ. ಮೈದಾನದಲ್ಲಿ ರವಿವಾರ ಸಂಜೆ ನಡೆದ ಬಹಿರಂಗ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿ ಸರ್ಕಾರ ಬರಬಾರದೆಂಬ ಉದ್ದೇಶದಿಂದ ಕಾಟಾಚಾರಕ್ಕೆ ಮೈತ್ರಿ ಸರ್ಕಾರ ನಡೆಸಿದ್ದರು. ಅದೂ ಅಲ್ಲದೇ ಮತ್ತೊಮ್ಮೆ ಸಾರ್ವತ್ರಿಕ ಚುನಾವಣೆ ನಡೆಸಬೇಕೆಂಬುದು ಅವರ ಯೋಚನೆಗೆ ಈ ಉಪ ಚುನಾವಣೆಯಲ್ಲಿ ಹದಿನೇಳು ಶಾಸಕರು ಜಯಗಳಿಸಿ ತಕ್ಕ ಪಾಠ ಕಲಿಸಲಿದ್ದಾರೆ. ಇದಕ್ಕೆ ಎಲ್ಲ ಸಮುದಾಯದ ಜನ ಬಿಜೆಪಿಯನ್ನು ಅತ್ಯಧಿಕ ದಾಖಲೆ ಮತಗಳಿಂದ ರಮೇಶ ಜಾರಕಿಹೊಳಿಯವರನ್ನು ಆರಿಸಿ ತರಬೇಕೆಂದು ಮನವಿ ಮಾಡಿಕೊಂಡರು.
ಮುಂದಿನ ಮೂರುವರೆ ಸುಭದ್ರ ಸರ್ಕಾರ ರಚನೆಗೆ ನಾನು ಮುಖ್ಯಮಂತ್ರಿಯಾಗಲು ತಮ್ಮ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ ರಮೇಶ ಜಾರಕಿಹೊಳಿಯವರನ್ನು ಅತ್ಯಧಿಕ ಮತಗಳಿಂದ ಚುನಾಯಿಸಬೇಕು. ರಾಜ್ಯದ ಜನತೆಗೆ ಉತ್ತಮ ಸರ್ಕಾರ ನೀಡಲು ಎಲ್ಲರೂ ಮುಂದಾಗಬೇಕು. ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ ಎಂದರು. ಮುಂಬರುವ ದಿನಗಳಲ್ಲಿ ಇಲ್ಲಿಯ ಜನರ ಮನವಿಯಂತೆ ಸರ್ಕಾರಿ ಪದವಿ ಕಾಲೇಜನ್ನು ಸ್ಥಾಪಿಸಿ, ಸ್ವ ಸಹಾಯ ಸಂಘಗಳಿಗೆ ಹೆಚ್ಚಿನ ಅನುದಾನ ನೀಡಿ ರೈತರು, ಮಹಿಳೆಯರನ್ನು ಸಬಲೀಕರಣಗೊಳಿಸಲಾಗುವುದು ಎಂದರು.
ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಮಾತನಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸುಭದ್ರ ಮತ್ತು ಸ್ವಚ್ಛ ಸರ್ಕಾರ ನೀಡಲು ಅವಕಾಶ ಕಲ್ಪಿಸಬೇಕು. ರಾಜ್ಯದ ಹಾಗೂ ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿ ನನ್ನನ್ನು ಅತ್ಯಧಿಕ ಮತಗಳಿಂದ ಚುನಾಯಿಸಬೇಕು ಮತ್ತು ನಿಮ್ಮ ಸೇವೆಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿ ಮತಯಾಚಿಸಿದರು.
ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಈ ಭಾಗದ ಎಲ್ಲ ಸಮುದಾಯದ ಜನರ ಬೆಂಬಲ ದೊರಕಿದೆ. ನಾವು ರಮೇಶ ಜಾರಕಿಹೊಳಿ ಅವರನ್ನು ಚುನಾಯಿಸುವ ಮೂಲಕ ಎಲ್ಲ ಸಮುದಾಯದ ಏಳ್ಗೆಗೆ ಅವಕಾಶ ಕಲ್ಪಿಸಿ ಕೊಡಲು ನಿಮ್ಮ ಅಮೂಲ್ಯ ಮತವನ್ನು ನೀಡಿ ಆರಿಸಿ ತರಬೇಕೆಂದು ಪುನಃ ಮನವಿ ಮಾಡಿದರು.
ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಉಮೇಶ ಕತ್ತಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಎ.ಎಸ್. ಪಾಟೀಲ ನಡಹಳ್ಳಿ, ಮುರಗೇಶ ನಿರಾಣಿ, ಮುನಿರತ,್ನ ನಾಗೇಶ, ಆರ್. ಶಂಕರ ಅವರು ಮಾತನಾಡಿದರು.
ವೇದಿಕೆ ಮೇಲೆ ಪ್ರತಾಪಗೌಡ ಪಾಟೀಲ, ಬೆಳಗಾವಿ ವಿಭಾಗೀಯ ಪ್ರಭಾರಿ ಈರಣ್ಣ ಕಡಾಡಿ, ಜಯಾನಂದ ಮುನವಳ್ಳಿ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.

Related posts: