ಗೋಕಾಕ:ಕುಂದರನಾಡ ಭಾಗದಲ್ಲಿ ಶಾಸಕರಾದ ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಬಿರುಸಿನ ಪ್ರಚಾರ
ಕುಂದರನಾಡ ಭಾಗದಲ್ಲಿ ಶಾಸಕರಾದ ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಬಿರುಸಿನ ಪ್ರಚಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 3 :
ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿರುವ ಇಂದಿನ ಸನ್ನಿವೇಶದಲ್ಲಿ ಪ್ರಬಲ ಕೋಮಿಗೆ ಸೇರಿರುವ ಪ್ರಶ್ನಾತೀತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲಿಕ್ಕೆ ಕಾಂಗ್ರೇಸ್ಸಿಗೆ ಬೈ ಬೈ ಹೇಳಿ ಬಿಜೆಪಿ ಸರ್ಕಾರದ ರಚನೆಯಲ್ಲಿ ಅತ್ಯಮೂಲ್ಯ ಪಾತ್ರ ವಹಿಸಿರುವ ರಮೇಶ್ ಜಾರಕಿಹೊಳಿ ಅವರ ತ್ಯಾಗ ಎಲ್ಲರಿಗಿಂತ ದೊಡ್ಡದು ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಉಮೇಶ ಕತ್ತಿ ಹೇಳಿದರು.
ಮಂಗಳವಾರದಂದು ಅಂಕಲಗಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ರಮೇಶ್ ಜಾರಕಿಹೊಳಿ ಅವರ ಪ್ರಚಾರಾರ್ಥವಾಗಿ ಪಾದಯಾತ್ರೆ ನಡೆಸಿ ಮಾತನಾಡಿ ಅವರು, ರಮೇಶ್ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದೆ ಎಂದು ಹೇಳಿದರು.
ಮೈತ್ರಿ ಸರ್ಕಾರದ ಭ್ರಷ್ಠಾಚಾರ ಹಾಗೂ ದುರಾಡಳಿತಕ್ಕೆ ಬೇಸತ್ತು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದರೂ ಸ್ಪೀಕರ್ ಅವರ ಕಾನೂನು ಬಾಹೀರ ನಿರ್ಣಯದಿಂದ ಶಾಸಕ ಸ್ಥಾನಕ್ಕೆ ಅನರ್ಹತೆಯ ತಲೆಪಟ್ಟಿ ಕಟ್ಟಿಕೊಂಡು 8-10 ತಿಂಗಳು ಕಾಲ ಕೋರ್ಟ್‍ಗೆ ಅಲಿದಾಡಿ ರಾಜಕೀಯ ವನವಾಸ ಅನುಭವಿಸಿದ ರಮೇಶ್ ಜಾರಕಿಹೊಳಿ ಅವರಿಗೆ ಕೊನೆಗೂ ದೇವರು ಹಾಗೂ ಜನರ ಆಶೀರ್ವಾದದಿಂದ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲಿಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿತೋ ಅಂದೇ ರಮೇಶ್ ಅವರು ಗೆಲುವಿನ ನಗೆಯನ್ನು ಬೀರಿದರೆಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನ ಶಾಸಕರಿದ್ದರೂ ಯಡಿಯೂರಪ್ಪನವರನ್ನು ಸಿಎಂ ಮಾಡಲಿಕ್ಕೆ ಯಾರೂ ಮುಂದೆ ಬರಲಿಲ್ಲ. ಅಂತಹ ಸನ್ನಿವೇಶದಲ್ಲಿ ರಾಜ್ಯದಲ್ಲಿ ಸ್ಥಿರ ಹಾಗೂ ಉತ್ತಮ ಆಡಳಿತ ನೀಡಲು ಬಿಜೆಪಿಗೆ ಮಾತ್ರ ಸಾಧ್ಯವೆಂಬುದನ್ನು ಅರಿತು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಸಂಕಲ್ಪದಿಂದ ರಮೇಶ್ ಜಾರಕಿಹೊಳಿ ಅವರು ತಮ್ಮ 16ಜನ ಶಾಸಕರೊಂದಿಗೆ ಬಿಜೆಪಿಗೆ ಕೈ ಜೋಡಿಸಿದ್ದಾರೆ. ನಮ್ಮ ಸರ್ಕಾರದ ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ರಮೇಶ್ ಜಾರಕಿಹೊಳಿ ಅವರನ್ನು ಎಲ್ಲ ಸಮುದಾಯದ ಮುಖಂಡರು ಬೆಂಬಲ ನೀಡಿ ಆಶೀರ್ವಾದ ಮಾಡುವಂತೆ ಕೋರಿದರು.
ರಮೇಶ್ ಜಾರಕಿಹೊಳಿ ಅವರು ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವರಾಗುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇಯಾದ ಕೊಡುಗೆ ನೀಡಿ ಗೋಕಾಕ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂದು ಉಮೇಶ್ ಕತ್ತಿ ಹೇಳಿದರು.
ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಬರುವ ಗುರುವಾರದಂದು ನಡೆಯುವ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಆಶೀರ್ವಾದ ಮಾಡಬೇಕು. ಗೋಕಾಕ ನಗರ,ಗ್ರಾಮೀಣ ಕ್ಷೇತ್ರ ಮತ್ತು ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೊಸ್ಕರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ವಾಗ್ದಾನ ಮಾಡಿದ್ದಾರೆ. ಎಲ್ಲ ಸಮುದಾಯಗಳನ್ನು ಕೂಡಿಸಿಕೊಂಡು ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಕಾರ್ಯ ನಿರ್ವಹಿಸಿರುವ ರಮೇಶ್ ಜಾರಕಿಹೊಳಿ ಅವರು ಅಭಿವೃದ್ಧಿ ಕಾರ್ಯಗಳ ರೂವಾರಿ ಎನಿಸಿದ್ದಾರೆ. ಗೋಕಾಕವನ್ನು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಅವರ ಶೇಜ್ ನಂ.2 ಇದ್ದು, ಕಮಲ ಹೂವಿನ ಗುರ್ತಿಗೆ ಬಟನ್ ಒತ್ತಿ ಯಡಿಯೂರಪ್ಪನವರ ಸರ್ಕಾರ ಬಾಕಿ ಉಳಿದಿರುವ ಅವಧಿಯನ್ನು ಪೂರ್ಣಗೊಳಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪನವರ ಕೈ ಬಲಪಡಿಸಲು ಅವರನ್ನು ಆಯ್ಕೆ ಮಾಡುವಂತೆ ಮತದಾರರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ, ವಿ.ಎಸ್. ಬೋಸನವರ, ಬಸನಗೌಡ ನಿರ್ವಾಣಿ, ರುದ್ರಗೌಡ ಪಾಟೀಲ, ಅಣ್ಣಾಸಾಬ ರಾಜಮನಿ, ರಾಜು ತಳವಾರ, ಶಕೀಲ ಕೋತವಾಲ, ಉಮೇಶ ನಿರ್ವಾಣಿ, ಜೈನುಲ್ಲಾ ಹವಾಲ್ದಾರ, ಹುಸೇನಸಾಬ ದೇಸಾಯಿ, ಬಸವರಾಜ ಕರದೇಸಾಯಿ ಮುಂತಾದವರು ಉಪಸ್ಥಿತರಿದ್ದರು. ಕುಂದರನಾಡಿನಲ್ಲಿ ಬಿಜೆಪಿ ಶಾಸಕರಾದ ಉಮೇಶ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಬಿರುಸಿನ ಪ್ರಚಾರ ನಡೆಸಿದರು.