ಗೋಕಾಕ:ಕಾರ್ಯಕರ್ತರಿಗೆ ಸದಾ ಚಿರಋಣಿಯಾಗಿರುವೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಕಾರ್ಯಕರ್ತರಿಗೆ ಸದಾ ಚಿರಋಣಿಯಾಗಿರುವೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 6 :
ಗುರುವಾರದಂದು ನಡೆದ ಗೋಕಾಕ ವಿಧಾನಸಭಾ ಉಪಚುನಾವಣೆಯಲ್ಲಿ ಕಾರ್ಯಕರ್ತರ ಸತತ ಪರಿಶ್ರಮದಿಂದ ಹಾಗೂ ಮತದಾರ ಪ್ರಭುಗಳ ಆಶೀರ್ವಾದದಿಂದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ವಿಜಯಶಾಲಿಯಾಗಲಿದ್ದಾರೆ. ಜೊತೆಗೆ ಡಿ.9ರ ನಂತರ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಮೇಶ ಜಾರಕಿಹೊಳಿ ಅವರಿಗೆ ಮಹತ್ವದ ಖಾತೆಯ ಸಚಿವರನ್ನಾಗಿ ನೇಮಕ ಮಾಡುವರೆಂದು ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರದಂದು ಸಂಜೆ ತಮ್ಮ ಗೃಹ ಕಚೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ನಡೆದ ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಕಾರ್ಯಕರ್ತರು ಈ ಉಪಚುನಾವಣೆಯಲ್ಲಿ ಅಭ್ಯರ್ಥಿಪರ ಬಿರುಸಿನ ಪ್ರಚಾರ ನಡೆಸಿದರು. ತಮ್ಮ ತಮ್ಮ ಕುಟುಂಬದ ಸದಸ್ಯರನ್ನು, ಬಂಧು-ಬಾಂಧವರನ್ನು ಹಾಗೂ ಹಿತೈಷಿಗಳನ್ನು ಭೇಟಿ ಮಾಡಿ ಬಿಜೆಪಿಗೆ ಮತ ಸಿಗುವಂತೆ ನೋಡಿಕೊಂಡಿದ್ದಾರೆ. ಈ ಉಪ-ಚುನಾವಣೆಯಲ್ಲಿ ತಾವೇ ಸ್ಪರ್ಧಿಸಿದ್ದೇವೆ ಎಂದು ಭಾವಿಸಿ ಸುಮಾರು ಸಾವಿರಕ್ಕೂ ಅಧಿಕ ಕಾರ್ಯಕರ್ತರು 10 ದಿನಗಳ ಕಾಲ ಗೋಕಾಕ ಮತಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ಸಂಚರಿಸಿ ಪ್ರಚಾರ ಕಾರ್ಯ ನಡೆಸಿದರು. ಕಾರ್ಯಕರ್ತರ ಬಲದಿಂದ ರಮೇಶ ಜಾರಕಿಹೊಳಿ ಅವರಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲಿದ್ದಾರೆಂದು ಅವರು ಹೇಳಿದರು.
ರಾಜ್ಯದಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರುವರೆ ವರ್ಷಗಳ ವರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಡಳಿತ ನಡೆಸಿ ರಾಜ್ಯದ ಸಮಗ್ರ ವಿಕಾಸಕ್ಕೆ ಹಾಗೂ ಎಲ್ಲ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಾ ದೇಶದಲ್ಲಿ ಕರ್ನಾಟಕವನ್ನು ನಂ-1 ರಾಜ್ಯವನ್ನಾಗಿ ಪರಿವರ್ತಿಸುವ ಇರಾದೆ ಹೊಂದಿದ್ದಾರೆಂದು ಹೇಳಿದರು.
ಎಲ್ಲ ಸಮಾಜ ಬಾಂಧವರನ್ನು ಒಟ್ಟಾಗಿ ಕರೆದುಕೊಂಡು ಅಭಿವೃದ್ದಿಗೆ ಶ್ರಮಿಸುವಂತೆ ಈಗಾಗಲೇ ರಮೇಶ ಅವರಿಗೆ ಸಲಹೆ ನೀಡಿದ್ದೇನೆ. ಈಗಿರುವ ಪದ್ಧತಿಯನ್ನು ಬದಲಾವಣೆ ಮಾಡಿ ಹೊಸ ಪದ್ಧತಿಯನ್ನು ಅಳವಡಿಸಲು ತಿಳಿಸಿದ್ದೇನೆ. ಗೋಕಾಕ ನಗರದಲ್ಲಿ ಒಟ್ಟು 23 ಬಾರಿ ವಿವಿಧ ಸಮಾಜ ಮುಖಂಡರ ಸಭೆಗಳನ್ನು ನಡೆಸಿದ್ದೇನೆ. ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿದ್ದರಿಂದ ಎಲ್ಲರೂ ಒಪ್ಪಿಕೊಂಡು ರಮೇಶ ಜಾರಕಿಹೊಳಿ ಅವರಿಗೆ ಮತ ನೀಡಿದ್ದಾರೆ. ಹೀಗಾಗಿ ಎಲ್ಲ ಸಮಾಜಗಳನ್ನು ಗೌರವಿಸಿ ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ಅವರಲ್ಲಿ ಮನವಿ ಮಾಡಿದ್ದಾಗಿ ಹೇಳಿದರು.
ನೆರೆ ಸಂತ್ರಸ್ತರಿಗೆ ಹೊಸ ಬದುಕು: ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ನದಿ ತೀರದ ಗ್ರಾಮಗಳ ಸಂತ್ರಸ್ತರ ಬದುಕು ದುಸ್ತರವಾಗಿದೆ. ಅವರಿಗೆ ಶಾಶ್ವತ ಸೂರು ಒದಗಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು 5 ಲಕ್ಷ ರೂಗಳ ಪರಿಹಾರವನ್ನು ಒದಗಿಸಿದ್ದಾರೆ. ಉಪಚುನಾವಣೆ ಫಲಿತಾಂಶದ ಬಳಿಕ ನೆರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡಲು ನಾವು ಬದ್ಧರಿದ್ದೇವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಟಿಎಪಿಸಿಎಮ್‍ಎಸ್ ಅಧ್ಯಕ್ಷ ಅಶೋಕ ನಾಯಿಕ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗೋಳ, ಪ್ರಭಾ ಶುಗರ ಉಪಾಧ್ಯಕ್ಷ ರಾಮಣ್ಣ ಮಹಾರೆಡ್ಡಿ, ಬಸವಂತ ಕಮತಿ, ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಶ ಪಾಟೀಲ ಸೇರಿದಂತೆ ಹಲವು ಪ್ರಮುಖ
ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.