RNI NO. KARKAN/2006/27779|Saturday, December 14, 2024
You are here: Home » breaking news » ಮೂಡಲಗಿ :ನೆರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಸರಕಾರ ಬದ್ಧವಿದ್ದೆ : ಶಾಸಕ ಬಾಲಚಂದ್ರ

ಮೂಡಲಗಿ :ನೆರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಸರಕಾರ ಬದ್ಧವಿದ್ದೆ : ಶಾಸಕ ಬಾಲಚಂದ್ರ 

ನೆರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಸರಕಾರ ಬದ್ಧವಿದ್ದೆ : ಶಾಸಕ ಬಾಲಚಂದ್ರ

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಡಿ 7 :

 

ನೆರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವರಿಗೆ ಶಾಶ್ವತ ಸೂರು ಒದಗಿಸಲು ಸರಕಾರ ಬದ್ಧವಿದ್ದು, ಸಂತ್ರಸ್ತರಿಗೆ ವಾಸಿಸಲು ಶಾಶ್ವತವಾಗಿ ಮನೆ ನಿರ್ಮಿಸಿಕೊಡಲು ಸರಕಾರ 5 ಲಕ್ಷ ರೂಗಳ ಪರಿಹಾರ ನೀಡುತ್ತಿದೆ, ಈಗಾಗಲೇ ಸಂತ್ರಸ್ತರ ಕುಟುಂಬಗಳಿಗೆ ಒಂದು ಲಕ್ಷ ರೂಗಳ ಅನುದಾನವನ್ನು ಸಂತ್ರಸ್ತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಶಾಸಕ ಮತ್ತು ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅವರು ಶನಿವಾರದಂದು ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬಾಕಿ ಉಳಿದಿರುವ ಪರಿಹಾರ ಮೊತ್ತವನ್ನು ಡಿಸೆಂಬರ ಅಂತ್ಯದೊಳಗೆ ಬಿಡುಗಡೆ ಮಾಡುವದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಸಮೀಕ್ಷೆ ಮಾಡಿದಂತೆ ಎ.ಹಾಗೂ ಬಿ ಕಟಗೇರಿಯ ಸಮೀಕ್ಷೆಯಲ್ಲಿ ಯಾವುದೇ ಸಮಸ್ಯೆಗಳು ಉಂಟಾಗಿಲ್ಲ. ಆದರೆ ಸಿ.ಕಟಗೇರಿಯ ಸಮಸ್ಯೆಗಳು ಉದ್ಭವಿಸಿದ್ದು, ಇದರ ಮನೆಗಳ ಯಾದಿಯನ್ನು ಪ್ರತ್ಯೇಕ ಮಾಡಬೇಕು, ಯಾರ ಒತ್ತಾಯಕ್ಕೂ ಮಣೆಯದೇ ಗುಪ್ತ ಸಮೀಕ್ಷೆಯನ್ನು ಮಾಡಿ ತಹಶೀಲ್ದಾರ ಮೂಲಕ ಬೈಲಹೊಂಗಲ ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು, ಈಗಾಗಲೇ ಸಿ ಕಟಗೇರಿಯನ್ನು ಹೊಂದಿದವರಿಗೆ ಸರಕಾರ 50 ಸಾವಿರ ರೂಗಳನ್ನು ನೀಡುತ್ತಿದೆ ಆದರೆ ಈ ಹಣ ಸಾಲದ್ದರಿಂದ ಸಂತ್ರಸ್ತರಿಗೆ ಪರ್ಯಾವಾಗಿ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆಂದು ಹೇಳಿದರು. ಧಾರಾಕಾರ ಮಳೆಯಿಂದಾಗಿ ಮನೆಗಳು ಕುಸಿತಗೊಂಡಿದ್ದು, ಅಂತಹ ಮನೆಗಳ ಸಮೀಕ್ಷೆ ಕಾರ್ಯವನ್ನು ಸಹ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನದಿ ತೀರದ ಗ್ರಾಮಗಳ ರೈತರಿಗೆ ಸಮರ್ಪಕ ವಿದ್ಯತ್ತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಅವರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ವಾರದೊಳಗೆ ವಿದ್ಯುತ್ತ ಸಂಪರ್ಕವನ್ನು ರೈತ ಸಮುದಾಯಕ್ಕೆ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.
ಸಾರ್ವಜನಿಕರ ಹಿತದೃಷ್ಠಿಯಿಂದ ಧರ್ಮಟ್ಟಿ ಹಳ್ಳದ ಸೇತುವೆ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ವೆಚ್ದಲ್ಲಿ ಕಾಮಗಾರಿ ಪ್ರಾರಂಭವಾಗಿದೆ, ಅರಭಾವಿ ಕ್ಷೇತ್ರದಲ್ಲಿ ಹದಿಗೆಟ್ಟ ರಸ್ತೆಗಳ ಸುಧಾರಣೆಗಾಗಿ ಅನುದಾನ ಬಂದಿದ್ದು, ಕಾಲ ಮೀತಿಯೊಳಗೆ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೂಡಲಗಿ ಪಟ್ಟಣದಲ್ಲಿ ಶೀಘ್ರದಲ್ಲಿಯೇ ಮಿನಿ ವಿಧಾನ ಸೌಧ ಕಟ್ಟಡ, ಬಸ್ ಘಟಕ ಹಾಗೂ ಬಡ ಕುಟುಂಬಗಳಿಗೆ ಆಶ್ರಯ ಮನೆಗಳ ನಿರ್ಮಾಣವನ್ನು ಮಾಡಲಾಗುವುದು ಎಂದು ಹೇಳಿದರು.
ಮೂಡಲಗಿ ಪುರಸಭೆಗೆ ಮಂಜೂರ ಆದ ಎರಡು ಕೋಟಿ ರೂಗಳ ಅನುದಾನದಲ್ಲಿ ರಸ್ತೆ ಹಾಗೂ ಒಳಚರಂಡಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಜನೇವರಿ 10ರೊಳಗೆ ಸಂತ್ರಸ್ತ ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು. ಧೈರ್ಯದಿಂದ ಕೆಲಸ ಮಾಡಿ. ಯಾರ ಪ್ರಭಾವಕ್ಕೂ ಒಳಗಾಗಬೇಡಿ. ತಿಂಗಳೊಳಗೆ ಸಂತ್ರಸ್ತರ ಕುಟುಂಬಗಳ ನೆರವಿಗೆ ಧಾವಿಸದಿದ್ದಲ್ಲಿ ಅದಕ್ಕೆ ಅಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿ ಮಾಡಲಾಗುವುದೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಖಡಕ ವಾರ್ನಿಂಗ್ ಮಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ ದಿಲ್‍ಶಾದ ಮಹಾಂತ ಸೇರಿದಂತೆ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related posts: