ಘಟಪ್ರಭಾ:ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರು ಕೈಜೋಡಿಸಬೇಕು : ಎ.ಸಿ.ಮನ್ನಿಕೇರಿ
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರು ಕೈಜೋಡಿಸಬೇಕು : ಎ.ಸಿ.ಮನ್ನಿಕೇರಿ
ನಮ್ಮ ಬೆಳಗಾವಿ ಘಟಪ್ರಭಾ ಡಿ 29 :
ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರು ಕೈಜೋಡಿಸಿದರೆ ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಮಾಡಲು ಸಹಕಾರಿಯಾಗುತ್ತದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಹೇಳಿದರು.
ಅವರು ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಸಾರ್ವಜನಿಕರ ದೇಣಿಗೆಯಿಂದ ನಿರ್ಮಿಸಲಾದ ಮೂರು ಸ್ಮಾರ್ಟ್ ಕ್ಲಾಸ್‍ಗಳನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯೊಂದು ದೇಗುಲವಿದ್ದಂತೆ ಇಂತಹ ದೇಗುಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಾರೆ. ಸಾರ್ವಜನಿಕರು ದೇವಸ್ಥಾನಗಳಿಗೆ ನೀಡುವ ದಾನಗಳಲ್ಲಿ ಒಂದಿಷ್ಟು ಸರ್ಕಾರಿ ಶಾಲೆಗಳಿಗೆ ನೀಡಿದರೆ ಶಾಲೆಗಳ ಅಭಿವೃದ್ಧಿ ಹೊಂದುತ್ತವೆ. ಈ ನಿಟ್ಟಿನಲ್ಲಿ ಮುಂದಾಗಿರುವ ಹುಣಶ್ಯಾಳ ಪಿ.ಜಿ ಗ್ರಾಮಸ್ಥರು ಸುಮಾರು ಶಾಲೆಗೆ 2,13,000 ರೂಪಾಯಿ ದೇಣಿಗೆ ನೀಡಿ ತಮ್ಮ ಊರಿನ ಶಾಲೆಗೆ ತಾವೇ ಸ್ಮಾರ್ಟ್ ಕ್ಲಾಸ್‍ಗಳನ್ನು ನಿರ್ಮಿಸಿಕೊಂಡು ಮಾದರಿಯಾಗಿದ್ದಾರೆಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯೋಪಾಧ್ಯಾಯ ಜಿ.ಎಲ್.ಕೋಳಿ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಸ್ಮಾರ್ಟ್ ಕ್ಲಾಸ್‍ಗಳು ಅತಿ ಅವಶ್ಯಕವಾಗಿದ್ದು ಊರಿನ ಮಹನೀಯರು ದೇಣಿಗೆ ನೀಡಿದ್ದು ಶ್ಲಾಘನಿಯ ಎಂದರು.
ಗೋಕಾಕ ವಿವೇಕ ಕೋಚಿಂಗ್ ಕೇಂದ್ರದ ಸಂಸ್ಥಾಪಕ ಎಸ್.ಕೆ.ಕಬಾಡಗಿ ಮಕ್ಕಳ ಮನಮುಟ್ಟುವಂತೆ ವಿವೇಕಾನಂದರ ವಿವೇಕವಾಣಿಗಳನ್ನು ಹೇಳುವ ಮೂಲಕ ದೇಶಭಕ್ತಿ ಹಾಗೂ ಗುರಿ ಮುಟ್ಟುವ ಸಂದೇಶÀವನ್ನು ನೀಡಿದರು.
ಇದೇ ಸಂದರ್ಭದಲ್ಲಿ ದೇಣಿಗೆ ನೀಡಿದ ಮಹನೀಯರನ್ನು ಕೃತಜ್ಞತೆ ಸಲ್ಲಿಸಿ ಸತ್ಕರಿಸಲಾಯಿತು. ಶಾಲೆಯ ಮುಖೋಪಾಧ್ಯಾಯ ಜಿ.ಎಲ್.ಕೋಳಿ ಅವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ ಲಭಿಸಿದ ಪ್ರಯುಕ್ತ ಸತ್ಕರಿಸಲಾಯಿತು.
ಶಿಕ್ಷಕರಾದ ಬಿ.ಬಿ.ದಗಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎ.ಗೌಡರ ಸ್ವಾಗತಿಸಿದರು. ಕೆ.ಎಂ.ಅರಭಾವಿ ನಿರೂಪಿಸಿದರು. ಎಸ್.ಎಸ್.ಹೂಗಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳಾದ ಆರ್.ಬಿ.ನಾಯ್ಕ್, ಎಸ್.ಡಿ.ಎಮ್.ಸಿ ಅಧ್ಯಕ್ಷ ತಮ್ಮಣ್ಣ ನಾಯ್ಕ್, ಮಹದೇವ ಕಡಿ, ತುಕಾರಾಮ ಬಂಗೇರ, ಗಂಗಪ್ಪ ಡಬ್ಬಣ್ಣವರ್, ಪ್ರಕಾಶ ನೇಸರಗಿ, ಮಹಾಂತೇಶ ರೊಡ್ಡನವರ, ಮಾಬೂಬಿ ನದಾಫ ಮುಂತಾದವರು ಉಪಸ್ಥಿತರಿದ್ದರು.