ಗೋಕಾಕ:ಸುಮಾರು 187 ವರ್ಷಗಳ ಹಿಂದೆಯೇ ಜ್ಯೋತಿಬಾ ಫುಲೆ ದಂಪತಿ ಎಲ್ಲರಿಗೂ ವಿದ್ಯೆ ಸಿಗಬೇಕು ಎಂಬ ಆಲೋಚನೆ ಮಾಡಿದ್ದು ಮಹತ್ವದ ಸಂಗತಿಯಾಗಿದೆ
ಸುಮಾರು 187 ವರ್ಷಗಳ ಹಿಂದೆಯೇ ಜ್ಯೋತಿಬಾ ಫುಲೆ ದಂಪತಿ ಎಲ್ಲರಿಗೂ ವಿದ್ಯೆ ಸಿಗಬೇಕು ಎಂಬ ಆಲೋಚನೆ ಮಾಡಿದ್ದು ಮಹತ್ವದ ಸಂಗತಿಯಾಗಿದೆ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜ 3 :
ಸುಮಾರು 187 ವರ್ಷಗಳ ಹಿಂದೆಯೇ ಜ್ಯೋತಿಬಾ ಫುಲೆ ದಂಪತಿ ಎಲ್ಲರಿಗೂ ವಿದ್ಯೆ ಸಿಗಬೇಕು ಎಂಬ ಆಲೋಚನೆ ಮಾಡಿದ್ದು ಮಹತ್ವದ ಸಂಗತಿಯಾಗಿದೆ. ಮಹಿಳೆಯರಿಗಾಗಿ ಶಾಲೆಗಳನ್ನು ಸ್ಥಾಪನೆ ಮಾಡಿದ ಕೀರ್ತಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿ.ವಿ.ಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಜ.3 ರಂದು ನಡೆದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾವಿತ್ರಿಬಾಯಿ ಫುಲೆ ಅವರು ತಮ್ಮ ಬದುಕಿನಲ್ಲಿ ಸಾಕಷ್ಟು ಸಮಸ್ಯೆ, ನೋವು ಅನುಭವಿಸಿ, ಜ್ಞಾನದ ಬೆಳಕಿಗಾಗಿ ಪರಿತಪಿಸುತ್ತಿರುವ ಮಹಿಳೆಯರಿಗೆ ಹಾಗೂ ಶೋಷಿತರ ಬಾಳಿಗೆ ಅಕ್ಷರ ದಾಸೋಹದ ಬೆಳಕು ನೀಡುವುದರ ಮೂಲಕ ಶ್ರಮಿಸಿದ ದಿಟ್ಟ ಮಹಿಳೆಯಾಗಿದ್ದರು ಎಂದು ಅಭಿಪ್ರಾಯ ಪಟ್ಟರು.
ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಶಾಲೆಯ ಸಹ ಶಿಕ್ಷಕ ಮಲ್ಲಿಕಾರ್ಜುನ ಹಿರೇಮಠ ಫುಲೆ ಅವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶೇಷ ಪಠ್ಯ ಚಟುವಟಿಕೆ ಆಯೋಜನೆ: ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನದ ಪ್ರಯುಕ್ತ ಶುಕ್ರವಾರದಂದು ಇಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ದಿನದ ಶಾಲಾವಧಿಗಿಂತ ಒಂದು ಗಂಟೆ ಹೆಚ್ಚುವರಿ ಸಮಯ ಶಾಲೆಯ ಎಲ್ಲ ತರಗತಿಗಳಲ್ಲಿ ಸಾವಿತ್ರಿಬಾಯಿ ಫುಲೆ ಅವರು ಶೈಕ್ಷಣಿಕ ವಲಯದ ಶಿಕ್ಷಣ ಕ್ರಾಂತಿ, ಬದುಕು, ಬರಹ ಹಾಗೂ ವಿವಿಧ ಪಠ್ಯ ಚಟುವಟಿಕೆ ಕುರಿತು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಶಾಲಾ ಮಕ್ಕಳು, ಶಿಕ್ಷಕ-ಶಿಕ್ಷಕಿಯರು ಸಾವಿತ್ರಿಬಾಯಿ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದರು.
ಮಂಜುನಾಥ ಹತ್ತಿ, ಮೋಹನ ತುಪ್ಪದ, ವಿ.ಬಿ.ಬಿರಾದಾರ, ಶುಭಾ.ಬಿ., ಪ್ರಕಾಶ ಮುರಕಟ್ನಾಳ, ರೂಪಾ ಖನಗಾಂವಿ, ದಯಾನಂದ ಮಾದರ, ಮಲ್ಹಾರಿ ಪೋಳ ಸೇರಿದಂತೆ ಎಸ್‍ಡಿಎಮ್‍ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.