ಗೋಕಾಕ:ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವದಿಲ್ಲ : ಸಿದ್ದಣ್ಣ ಗೌಡರ
ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವದಿಲ್ಲ : ಸಿದ್ದಣ್ಣ ಗೌಡರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 7 :
ವಿವಿಧತೆಯಲ್ಲಿ ಏಕತೆಯನ್ನು ಕಂಡ ಭಾರತ ದೇಶದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವದಿಲ್ಲವೆಂದು ನ್ಯಾಯವಾದಿ ಸಿದ್ದಣ್ಣ ಗೌಡರ ಹೇಳಿದರು.
ಮಂಗಳವಾರದಂದು ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯದಲ್ಲಿ ಗೋಕಾಕ ಮತಕ್ಷೇತ್ರದ ಬಿಜೆಪಿಯವರು ಹಮ್ಮಿಕೊಂಡ ಪೌರತ್ವ ಕಾಯ್ದೆಯ ತಿಳುವಳಿಕಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ದೇಶದಲ್ಲಿ 1955ರಲ್ಲಿ ಪೌರತ್ವ ಕಾಯ್ದೆ ಜಾರಿಗೆ ಬಂದಿದ್ದೂ ಹಂತ-ಹಂತವಾಗಿ ತಿದ್ದುಪಡಿಯಾಗುತ್ತಲೇ ಇದೆ. ಮುಸ್ಲಿಂರಿಂದ ಪೌರತ್ವ ಕಿತ್ತುಕೊಳ್ಳಲಾಗುತ್ತದೆ, ಮುಸ್ಲಿಂರನ್ನು ನುಸಳುಕೊರರೆಂದು ತಿರ್ಮಾನಿಸಲಾಗುತ್ತದೆ ಎಂಬುವುದು ವಿರೋಧ ಪಕ್ಷಗಳು ಕೇವಲ ವೋಟಬ್ಯಾಂಕ್‍ಗಾಗಿ ಮಾಡುತ್ತಿರುವ ಸುಳ್ಳು ಸುದ್ದಿಯಾಗಿದ್ದು, ಇದನ್ನು ನಂಬದೇ ನೆಮ್ಮದಿಯಿಂದ ಇರುವಂತೆ ತಿಳಿಸಿದರು.
ಭಾರತ ದೇಶ ಜಾತ್ಯಾತೀತ ರಾಷ್ಟ್ರವಾಗಿದ್ದು ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ, ಮುಸ್ಲಿಂ ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಅವರು ಅನ್ಯಾಯವಾಗಲು ಅವಕಾಶ ನೀಡುವದಿಲ್ಲ. ಭಾರತೀಯರಿಗೆ ಈ ಕಾಯ್ದೆಯಿಂದ ತೊಂದರೆಯಾಗುವದಿಲ್ಲ, ಈ ಕಾಯ್ದೆಯ ಉದ್ಧೇಶ ಪೌರತ್ವ ನೀಡುವುದೇ ಆಗಿದ್ದು, ಧಾರ್ಮಿಕವಾಗಿ ಬೇರೆ ಬೇರೆ ಇದ್ದರೂ ನಾವೆಲ್ಲರೂ ಭಾರತೀಯರೇ ಆಗಿದ್ದು ದೇಶಭಕ್ತಿಯೊಂದಿಗೆ ದೇಶದ ಅಭಿವೃದ್ದಿಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರುಗಳಾದ ಎಸ್.ವಿ.ದೇಮಶೇಟ್ಟಿ, ವೀರುಪಾಕ್ಷ ಯಲಿಗಾರ, ಮುಖಂಡರುಗಳಾದ ಶಾಮಾನಂದ ಪೂಜೇರಿ, ಮಹಾಂತೇಶ ತಾವಂಶಿ, ಪ್ರೇಮಾ ಭಂಡಾರಿ, ಲಕ್ಷ್ಮಣ ತಪಸಿ, ಎಸ್.ಎ.ಕೋತವಾಲ, ಅಬ್ಬಾಸ ದೇಸಾಯಿ, ಜ್ಯೋತಿಭಾ ಸುಭಂಜಿ, ಪ್ರಕಾಶ ಕರನಿಂಗ ಸೇರಿದಂತೆ ಅನೇಕರು ಇದ್ದರು.